Monday, November 3, 2025

ಸಿಎಂ ಕುರ್ಚಿ ಖಾಲಿ ಇಲ್ಲ, 2028ರವರೆಗೆ ಸಿದ್ದರಾಮಯ್ಯ ಅವ್ರೇ ಮುಖ್ಯಮಂತ್ರಿ: ಜಮೀರ್ ಅಹ್ಮದ್ ಸ್ಪಷ್ಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗಳು ವೇಗ ಪಡೆದಿರುವ ನಡುವೆಯೇ, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟನೆಯೊಂದನ್ನು ನೀಡಿದ್ದಾರೆ. “ಸಿಎಂ ಕುರ್ಚಿ ಖಾಲಿಯೇ ಇಲ್ಲ, 2028ರವರೆಗೆ ಸಿದ್ದರಾಮಯ್ಯನೇ ಮುಖ್ಯಮಂತ್ರಿ ಆಗಿರುತ್ತಾರೆ” ಎಂದು ಹೇಳುವ ಮೂಲಕ ಕಾಂಗ್ರೆಸ್ ಒಳಗಿನ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಸಿಎಂ ಹುದ್ದೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಮೀರ್ ಅಹ್ಮದ್, “ಡಿ.ಕೆ. ಶಿವಕುಮಾರ್ ಅವರ ಪಾತ್ರ ಪಕ್ಷವನ್ನು ಅಧಿಕಾರಕ್ಕೆ ತರಲು ಅತ್ಯಂತ ಪ್ರಮುಖವಾಗಿದೆ. ಅವರು ಭವಿಷ್ಯದಲ್ಲಿ ಮುಖ್ಯಮಂತ್ರಿ ಆಗಲಿ ಎಂಬ ಆಸೆ ನನಗೂ ಇದೆ. ಆದರೆ ಸದ್ಯಕ್ಕೆ ಸಿಎಂ ಹುದ್ದೆ ಖಾಲಿ ಇಲ್ಲ. ಅದೇ ರೀತಿ ಕೆಪಿಸಿಸಿ ಅಧ್ಯಕ್ಷರ ಹುದ್ದೆಯೂ ಖಾಲಿ ಇಲ್ಲ” ಎಂದು ಹೇಳಿದರು. ಅವರು ಸಿಎಂ ಬದಲಾವಣೆಯ ಕುರಿತು ಯಾವುದೇ ನಿರ್ಧಾರ ಹೈಕಮಾಂಡ್ ಮಟ್ಟದಲ್ಲೇ ಆಗುತ್ತದೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ, ಸಂಸದ ಡಿ.ಕೆ. ಸುರೇಶ್ ಕೂಡಾ ಇದೇ ಧ್ವನಿಯಲ್ಲಿ ಮಾತನಾಡಿ, “ಮುಂದಿನ ಚುನಾವಣೆಯನ್ನೂ ಸಿದ್ದರಾಮಯ್ಯ ನೇತೃತ್ವದಲ್ಲೇ ಎದುರಿಸುತ್ತೇವೆ” ಎಂದು ಘೋಷಿಸಿದ್ದಾರೆ. ಇದರಿಂದ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿದ್ದ ಬದಲಾವಣೆಯ ಊಹಾಪೋಹಗಳು ಇನ್ನಷ್ಟು ಶಮನಗೊಂಡಿವೆ.

‘ನವಂಬರ್ ಕ್ರಾಂತಿ’ ಅಥವಾ ನಾಯಕತ್ವ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ ಅವರು, “ರಾಜ್ಯದಲ್ಲಿ ಯಾವುದೇ ಕ್ರಾಂತಿ ಅಥವಾ ಬದಲಾವಣೆ ನಡೆಯುವುದಿಲ್ಲ. ನಮ್ಮ ಪಕ್ಷ ಶಿಸ್ತುಬದ್ಧವಾದದ್ದು. ಎಲ್ಲ ನಿರ್ಧಾರಗಳೂ ಹೈಕಮಾಂಡ್‌ನ ಕೈಯಲ್ಲಿವೆ ಮತ್ತು ನಾವು ಅದಕ್ಕೆ ಬದ್ಧರಾಗಿದ್ದೇವೆ” ಎಂದು ಸ್ಪಷ್ಟನೆ ನೀಡಿದರು.

error: Content is protected !!