ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಪ್ರೋ ಕಂಪೆನಿಯ ಸಂಸ್ಥಾಪಕ ಅಜೀಂ ಪ್ರೇಮ್‌ಜೀ ಅವರಿಗೆ ಪತ್ರ ಬರೆದು ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಕರ್ನಾಟಕದ ಐಟಿ ಕ್ಷೇತ್ರದ ಬೆಳವಣಿಗೆಯಲ್ಲಿ ನಿಮ್ಮ ಪಾತ್ರ ಅತ್ಯಂತ ಮಹತ್ವದ್ದು. ಆದರೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಟ್ರಾಫಿಕ್ ಸವಾಲುಗಳು ಹೆಚ್ಚುತ್ತಿವೆ. ವಿಶೇಷವಾಗಿ ಇಬ್ಲೂರು ಜಂಕ್ಷನ್‌ನಲ್ಲಿ ವಾಹನ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಗಂಭೀರ ಸಮಸ್ಯೆಯಾಗುತ್ತಿದೆ. ಇದು ನಗರದ ನಾಗರಿಕರ ದಿನನಿತ್ಯದ ಜೀವನದ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂದು ಉಲ್ಲೇಖಿಸಿದ್ದಾರೆ.
ಮುಖ್ಯಮಂತ್ರಿ ಪ್ರೇಮ್‌ಜೀ ಅವರಿಗೆ ಬರೆದಿರುವ ಪತ್ರದಲ್ಲಿ ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ ತಗ್ಗಿಸಲು ವಿಪ್ರೋ ಕ್ಯಾಂಪಸ್ ಆವರಣದಲ್ಲಿ ಸೀಮಿತ ಪ್ರಮಾಣದ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಸಲಹೆ ನೀಡಿದ್ದಾರೆ. ಪೀಕ್ ಅವರ್ ಸಮಯದಲ್ಲಿ ಈ ಕ್ರಮ ಜಾರಿಗೆ ಬಂದರೆ ಕನಿಷ್ಠ ಶೇ.30ರಷ್ಟು ಟ್ರಾಫಿಕ್ ತೊಂದರೆ ಕಡಿಮೆಯಾಗಲಿದೆ. ಇದರಿಂದ ನಗರದಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಸಾಧ್ಯವಾಗುತ್ತದೆ ಮನದಟ್ಟು ಮಾಡಿದ್ದಾರೆ.
ಈ ವಿಷಯದಲ್ಲಿ ವಿಪ್ರೋ ಸಂಸ್ಥಾಪಕರ ಸಹಾಯ ನಿರೀಕ್ಷಿಸುತ್ತಿದ್ದು, ಈ ಪ್ರಸ್ತಾಪವನ್ನು ಕಾರ್ಯಗತಗೊಳಿಸಲು ಸಾಧ್ಯವಾದಷ್ಟು ಬೇಗ ಅಧಿಕಾರಿಗಳ ಜೊತೆಗೂಡಿ ಯೋಜನೆ ರೂಪಿಸಿ. ನಿಮ್ಮ ಬೆಂಬಲ ದೊರೆತರೆ ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಬಂದು ನಾಗರಿಕರಿಗೆ ನಿರಾಳ ಸಂಚಾರ ಸಾಧ್ಯವಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.