ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂತಾರಾಷ್ಟ್ರೀಯ ಕಾಫಿ ದಿನದ ಅಂಗವಾಗಿ ಭಾರತೀಯ ಕಾಫಿ ಮಂಡಳಿ ಮತ್ತು ಸ್ಪೆಷಾಲಿಟಿ ಕಾಫಿ ಅಸೋಸಿಯೇಷನ್ ಸಹಯೋಗದಲ್ಲಿ ʼವಾಕ್ ವಿತ್ ಕಾಫಿʼ ಎಂಬ ವಿಶಿಷ್ಟ ಜಾಗೃತಿ ಅಭಿಯಾನ ನಡೆಯಿತು.
ಬೆಂಗಳೂರು ನಗರದ ಎಂ.ಜಿ.ರಸ್ತೆಯಿಂದ ಕಾಫಿ ಮಂಡಳಿ ಕಚೇರಿಯವರೆಗೂ ನಡೆದ ವಾಕಥಾನ್ ನಲ್ಲಿ ಸುಮಾರು 400ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಕಾಫಿ ಮಂಡಳಿಯ ಅಧ್ಯಕ್ಷ ಎಂ.ಜೆ. ದಿನೇಶ್ ಅವರ ನೇತೃತ್ವದಲ್ಲಿ ನಡೆದ ವಾಕಾ ಥಾನ್ ನಲ್ಲಿ ಕಾಫಿಯಿಂದ ಮನುಷ್ಯನ ಆರೋಗ್ಯದ ಮೆಲೆ ಆಗುವ ಪ್ರಯೋಜನಗಳ ಕುರಿತು ಜನರಿಗೆ ತಿಳಿಸುವ ಫಲಕಗಳನ್ನು ಪ್ರದರ್ಶನ ಮಾಡಲಾಯಿತು.
ಇದೇ ವೇಳೆ ಮಹಿಳೆಯರನ್ನು ಸಬಲೀಕರಣಗೊಳಿಸುವ ಸಲುವಾಗಿ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಪ್ರಾರಂಭಿಸಿರುವ ಇಂಡಿಯನ್ ಕಾಫಿ ಹೌಸ್ ಕಿಯೋಸ್ಕ್ ಲೋಕಾರ್ಪಣೆ ಮಾಡಲಾಯಿತು. ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್, ಅಂತಾರಾಷ್ಟ್ರೀಯ ಕಾಫಿ ದಿನ ಮತ್ತು ಕಾಫಿ ಸಂಶೋಧನಾ ಕೇಂದ್ರಕ್ಕೆ 100 ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ದೇಶದ 10 ರಾಜ್ಯಗಳಲ್ಲಿ ಅಭಿಯಾನ ನಡೆಯುತ್ತಿದೆ. ಅಲ್ಲದೆ, ಗ್ರಾಮೀಣ ಭಾಗದ ಮಹಿಳೆಯರನ್ನು ಸಬಲೀಕರಣರನ್ನಾಗಿಸುವ ಸಲುವಾಗಿ ಕಾಫಿ ಮಂಡಳಿಯಿಂದ 500 ಮಹಿಳೆಯರಿಗೆ ತರಬೇತಿ ನೀಡಿದ್ದು, ಅವರು ಮುಂದಿನ ದಿನಗಳಲ್ಲಿ 1 ಲಕ್ಷ ಮಹಿಳೆಯರಿಗೆ ತರಬೇತಿ ನೀಡುವ ಉದ್ದೇಶದಿಂದ ಇಂಡಿಯನ್ ಕಾಫಿ ಹೌಸ್ ಹೆಸರಿನಲ್ಲಿ ಕಿಯೋಸ್ಕ್ ಗಳನ್ನು ಪ್ರಾರಂಭಿಸಲಾಗಿದೆ ಎಂದರು. 
ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಉತ್ತೇಜನ ಸೊಸೈಟಿಯ ಮುಖ್ಯಸ್ಥರು ಕೆ.ಅನ್ನಪೂರ್ಣ, ಇಂಡಿಯನ್ ಕಾಫಿ ಮಂಡಳಿಯ ವತಿಯಿಂದ ಕಿಯೋಸ್ಕ್ ಪ್ರಾರಂಭವಾಗಿದೆ. ಈ ಕಿಯೋಸ್ಕ್ ಗಳನ್ನು ಮಹಿಳೆಯರೆ ನಿರ್ವಹಿಸಲಿದ್ದು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಮಹಿಳೆಯರನ್ನು ಆರ್ಥಿಕ ಸಬಲರನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.
ರಾಜಧಾನಿಯಲ್ಲೂ ಕಾಫಿ ಘಮ: ಅಂತಾರಾಷ್ಟ್ರೀಯ ಕಾಫಿ ದಿನದ ಅಂಗವಾಗಿ 400ಕ್ಕೂ ಹೆಚ್ಚು ಮಂದಿ ವಾಕಾಥಾನ್!
 
                                    
