ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಡುಗಡೆಯಿಗೂ ಮುನ್ನವೇ ಹಲವು ನೆಗೆಟಿವ್ ಚರ್ಚೆಗಳು ಮತ್ತು ಫ್ಲಾಪ್ ಭವಿಷ್ಯವಾಣಿಗಳ ನಡುವೆ ತೆರೆಗೆ ಬಂದ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ ಮೊದಲ ದಿನವೇ ಅಚ್ಚರಿ ಮೂಡಿಸಿದೆ. ಭಾರೀ ಬಜೆಟ್, ವಿವಾದಾತ್ಮಕ ವಿಷಯ ಮತ್ತು ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಶಕ್ತಿಯುತ ಆರಂಭ ಮಾಡಿದೆ.
ಸುಮಾರು 300 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ಚಿತ್ರ ಮೊದಲ ದಿನ 18 ಕೋಟಿ ರೂ. ಗಳಿಸಬಹುದು ಎಂಬ ಅಂದಾಜು ಕೇಳಿಬಂದಿತ್ತು. ಆದರೆ, ಎಲ್ಲ ಲೆಕ್ಕಾಚಾರಗಳನ್ನು ಮೀರಿಸಿ ‘ಧುರಂಧರ್’ ಮೊದಲ ದಿನವೇ ಸುಮಾರು 27 ಕೋಟಿ ರೂ. ಗಳಿಕೆ ದಾಖಲಿಸಿದೆ. ಇದು ರಣವೀರ್ ಸಿಂಗ್ ವೃತ್ತಿಜೀವನದಲ್ಲೇ ಅವರ ಯಾವುದೇ ಚಿತ್ರದ ಅತ್ಯಧಿಕ ಆರಂಭಿಕ ಗಳಿಕೆ ಎನ್ನಲಾಗಿದೆ.
ಇದಕ್ಕೂ ಮೊದಲು ‘ಪದ್ಮಾವತ್’ ಸಿನಿಮಾ ಭಾರೀ ವಿವಾದಗಳ ನಡುವೆ ಬಿಡುಗಡೆಯಾಗಿ ಮೊದಲ ದಿನ 24 ಕೋಟಿ ರೂ. ಗಳಿಸಿತ್ತು. ಈಗ ಆ ದಾಖಲೆಯನ್ನು ‘ಧುರಂಧರ್’ ಮುರಿದಿದೆ. ಚಿತ್ರಕ್ಕೆ ಸಿಕ್ಕಿರುವ ಪಾಸಿಟಿವ್ ವಿಮರ್ಶೆಗಳು ಹಾಗೂ ರಣವೀರ್ ಸಿಂಗ್ ತೀವ್ರ ಅಭಿನಯವೇ ಈ ಯಶಸ್ಸಿಗೆ ಪ್ರಮುಖ ಕಾರಣ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

