ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ವಿಧಾನಸಭಾ ಚುನಾವಣೆಯಿಂದ ಪ್ರಾರಂಭಿಸಿ, ಇನ್ನು ಮುಂದೆ ಎಲೆಕ್ಟ್ರಾನಿಕ್ ಮತಯಂತ್ರಗಳು ಅಭ್ಯರ್ಥಿಗಳ ಬಣ್ಣದ ಫೋಟೋಗಳನ್ನು ಹೊಂದಿರುತ್ತವೆ ಎಂದು ಕೇಂದ್ರ ಚುನಾವಣಾ ಆಯೋಗ ಬುಧವಾರ ತಿಳಿಸಿದೆ.
2015 ರಿಂದ, ಇವಿಎಂ ಮತಪತ್ರಗಳಲ್ಲಿ ಅಭ್ಯರ್ಥಿಗಳ ಕಪ್ಪು ಮತ್ತು ಬಿಳಿ ಫೋಟೋಗಳನ್ನು ಅಂಟಿಸಲಾಗುತ್ತಿದೆ. ಇದನ್ನು ಗುರುತಿಸಲು ಹಲವು ಮತದಾರರಿಗೆ ಕಷ್ಟವಾಗುತ್ತಿದೆ. ಹೀಗಾಗಿ ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ಮತಪತ್ರಗಳಲ್ಲಿ ಬದಲಾವಣೆ ತರಲು ಮುಂದಾಗಿದ್ದು, ಸುಲಭವಾಗಿ ಓದಲು ಮತ್ತು ಮತದಾರ ಸ್ನೇಹಿ ಮತಪತ್ರಗಳ ಬಿಡುಗಡೆಗೆ ಕ್ರಮ ಕೈಗೊಂಡಿದೆ. ಇದು ಬಿಹಾರ ವಿಧಾನಸಭೆ ಚುನಾವಣೆಯಿಂದಲೇ ಅನ್ವಯವಾಗಲಿದೆ.
ಸರಣಿ ಸಂಖ್ಯೆಯನ್ನು ಯಂತ್ರಗಳಲ್ಲಿ ಹೆಚ್ಚು ಪ್ರಮುಖವಾಗಿ ಪ್ರದರ್ಶಿಸಲಾಗುತ್ತದೆ ಎಂದು ಭಾರತ ಚುನಾವಣಾ ಆಯೋಗ ಬುಧವಾರ ತಿಳಿಸಿದೆ. ಇವಿಎಂ ಮತಪತ್ರಗಳ ವಿನ್ಯಾಸ ಮತ್ತು ಮುದ್ರಣದ ಸ್ಪಷ್ಟತೆ ಮತ್ತು ಓದುವಿಕೆಯನ್ನು ಹೆಚ್ಚಿಸಲು 1961ರ ಚುನಾವಣಾ ನೀತಿ ನಿಯಮಗಳು, ಸೆಕ್ಷನ್ 49 ಬಿ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.