ಹೊಸದಿಗಂತ ವರದಿ ಹುಬ್ಬಳ್ಳಿ:
ವೀರಶೈವ ಲಿಂಗಾಯತ ಎರಡು ಒಂದೇಯಾಗಿದ್ದು, ಆಚರಣೆ ಸಹ ಸಮನಾಗಿದೆ. ಕೆಲವು ಸ್ವಾಮಿಗಳು ಉದ್ದೇಶ ಪೂರ್ವಕವಾಗಿ ಕಂದಕ ನಿರ್ಮಾಣ ಮಾಡುತ್ತಿದ್ದಾರೆ ಎಂದು ಶಾಸಕಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಮ್ಯುನಿಸ್ಟ್ ಮೈಂಡ್ ಸ್ವಾಮಿಗಳು ಸಂಚು ರೂಪಿಸಿದ್ದಾರೆ. ಹಿಂದು ಎಂಬುವುದಕ್ಕೆ ಅಪಮಾನ ಮಾಡುವುದೇ ಇವರ ಕೆಲಸವಾಗಿದೆ ಎಂದು ಕಿಡಿಕಾರಿದರು.
ಈ ಮೂಲಕ ಹೋಮ, ಹವನ ಸೇರಿದಂತೆ ಹಿಂದು ಆಚರಣೆ ಅವಮಾನ ಮಾಡುವುದು ಇವರ ಮುಖ್ಯ ಉದ್ದೇಶವಾಗಿದೆ. ಕೆಲವರಂತು ಬಸವಣ್ಣನವರ ತಮ್ಮ ಆಸ್ತಿಯಂತೆ ವರ್ತಿಸುತ್ತಿದ್ದಾರೆ. ಬಸವ ತತ್ವದ ಬಗ್ಗೆ ಮಾತನಾಡುವ ಸ್ವಾಮಿಗಳು ಯಾಕೆ ಹೋಮ, ಹವನ, ಪಾದ ಪೂಜೆ ಮಾಡಿಸಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮಹಾಸಭಾ ಅಧ್ಯಕ್ಷ ಶಾಮನೂರ ಶಿವಶಂಕರಪ್ಪ, ಅರಣ್ಯ ಸಚಿವ ಈಶ್ವರ ಖಂಡ್ರೆ ಕೈಯಲ್ಲಿ ಇಟ್ಟುಕೊಂಡಿದ್ದಾರೆ. ವೀರಶೈವ ಮಹಾಸಭಾ ವಿಸರ್ಜನೆ ಮಾಡಬೇಕು. ಇದರಿಂದ ಯಾವುದೇ ವೀರಶೈವ ಲಿಂಗಾಯತ ಜನರಿಗೆ ಉಪಯೋಗವಿಲ್ಲ. ಇವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಹಿಂದು ಬರೆಯಿಸಲು ಎಂದು ಹೇಳಿಲ್ಲ ಎಂದಿದ್ದಾರೆ. ಸ್ವಾಮಿಗಳಿಗೆ ಬಿಟ್ಟಿದ್ದೇವೆ ಎಂದಿದ್ದಾರೆ. ಬಿಜೆಪಿ ಹಿಂದುಗಳ ಮತದಿಂದ ಅಧಿಕಾರಕ್ಕೆ ಬಂದಿದೆ. ಹಿಂದು ಧರ್ಮದ ರಕ್ಷಣೆಗೆ ಮತ ಹಾಕಿದ್ದಾರೆ. ಹಿಂದುತ್ವ ಆಚರಣೆ ಬದ್ಧವಾಗಿದ್ದರೆ ಬಿಜೆಪಿಯಲ್ಲಿ ಉಳಿಯಬೇಕು. ಇಲ್ಲದಿದ್ದರೆ ಬಿಜೆಪಿ ಬಿಟ್ಟು ತೊಲಗಿ. ದೇಶದಲ್ಲಿ ಹಿಂದುಗಳು ಎಲ್ಲರಿಗೆ ಉಳಿಗಾಲ. ಇಲ್ಲವಾದರೆ ಭಾರತ ಮುಸ್ಲಿಂ ದೇಶವಾಗಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸಾಬರ ಸರ್ಕಾರವಿದೆ. ಧರ್ಮಾಧರಿತ ಮುಸ್ಲಿಂ ಮೀಸಲಾತಿ ನೀಡಿದ್ದು ಏಕೆ? ಅಸಂವಿಧಾನಿಕ ನಡೆಯನ್ನು ಕಾಂಗ್ರೆಸ್ ಸರ್ಕಾರ ಅನುಸರಿಸುತ್ತಿದೆ. ಸಿದ್ದರಾಮಯ್ಯ ಸರ್ಕಾರ ಲಿಂಗಾಯತ ಅಪಮಾನ ಮಾಡಿದೆ. ಪಂಚಮ ಸಾಲಿ ಸಮಾಜದ ಮೇಲೆ ಪೊಲೀಸರಿಂದ ಹಲ್ಲೆ ಮಾಡಿಸಿದಾಗ ಯಾಕೆ ಸುಮ್ಮನಿದ್ದರು ಎಂದು ಹೇಳಿದರು.