ಹೊಸದಿಗಂತ ವರದಿ,ಹುಬ್ಬಳ್ಳಿ:
ರಾಹುಲ್ ಗಾಂಧಿ ಅವರನ್ನು ಇಟ್ಟುಕೊಂಡು ಕಾಂಗ್ರೆಸ್ ಯಾವತ್ತು ಉದ್ಧಾರವಾಗಲ್ಲ. ಕಾಂಗ್ರೆಸ್ ಸೋಲಿಗೆ ರಾಹುಲ್ ಗಾಂಧಿ ಕಾರಣ ಎಂದು ಸಂಸದ ಜದಗೀಶ್ ಶೆಟ್ಟರ್ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರೊಂದಿಗೆ ಇವಿಎಂ ಬಿಟ್ಟು ಬ್ಯಾಲೇಟ್ ಪೇಪರ್ ಬಳಕೆ ಬಗ್ಗೆ ಕಾಂಗ್ರೆಸ್ ಧ್ವನಿ ಎತ್ತಿರುವ ಬಗ್ಗೆ ಮಾತನಾಡಿದ ಅವರು, ಜನರ ವಿಶ್ವಾಸ ಕಳೆದುಕೊಂಡಿದ್ದರಿಂದ ಕಾಂಗ್ರೆಸ್ ಸೋಲುತ್ತಿದ್ದು, ಅದನ್ನು ಮರೆಮಾಚಲು ಮತಯಂತ್ರ(ಇವಿಎಂ) ಕಾರಣ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ ಎಂದರು.
ಮತ ಯಂತ್ರಗಳು ಸರಿಯಿಲ್ಲದಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ಹೇಗೆ ೧೩೬ ಸ್ಥಾನ ಗೆಲ್ಲುತ್ತಿತ್ತು. ಬ್ಯಾಲೇಟ್ ಮತದಾನ ಮೂರ್ಖತನದ ಪರಮಾವಧಿಯಾಗಿದೆ. ಹಿಂದೆ ಬ್ಯಾಲೇಟ್ ಬಾಕ್ಸ್‌ಗಳನ್ನು ಕಳುವು ಮಾಡಿರುವ ಅನೇಕ ಉದಾಹರಣೆಗಳಿವೆ. ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕ ಪಂಚಾಯಿತಿ ಗೆಲ್ಲಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ಗೆ ಗೊತ್ತಾಗಿದೆ. ಗುಂಡಾಗಿರಿ ಮಾಡಿ ಗೆಲ್ಲಲು ಹವನಿಸುತ್ತಿದ್ದಾರೆ. ತಮ್ಮ ರಾಷ್ಟ್ರ ನಾಯಕ ಮೆಚ್ಚಿಸುವ ಉದ್ದೇಶದಿಂದ ಕಸರತ್ತು ನಡೆಸಿದ್ದಾರೆ ಎಂದು ಕಿಡಿಕಾರಿದರು.
ಜಿಎಸ್‌ಟಿಯಲ್ಲಿ ತಂದಿರುವ ಸುಧಾರಣೆಯನ್ನು ಕಾಂಗ್ರೆಸ್ ಒಲ್ಲದ ಮನಸ್ಸಿನಿಂದ ಸ್ವಾಗತ ಮಾಡಿದೆ. ಜಿಎಸ್‌ಟಿ ಜಾರಿಗೆಯಾದಾಗಲೂ ಕಾಂಗ್ರೆಸ್ ವಿರೋಧ ಮಾಡಿತ್ತು. ಸರ್ಕಾರ ನಿರ್ಧಾರದಿಂದ ಜನರ ಮೇಲಿರುವ ಹೊರೆ ಎಷ್ಟು ಕಡಿಮೆಯಾಗಲಿದೆ ಎಂಬುವುದು ನೋಡಬೇಕು. ಕಾಂಗ್ರೆಸ್ ಕೇಂದ್ರ ನಿರ್ಧಾರ ಒಪ್ಪಬೇಕು ಎಂದರು.