ಹೊಸದಿಗಂತ ಬಳ್ಳಾರಿ:
“ಮಹಾತ್ಮ ಗಾಂಧೀಜಿಯವರ ಹೆಸರು ಹೇಳಿಕೊಂಡು ರಾಜಕೀಯ ಮಾಡುವ ಕಾಂಗ್ರೆಸ್ ನಾಯಕರು, ಎಂದಾದರೂ ಅವರ ತತ್ವಗಳನ್ನು ಪಾಲಿಸಿದ್ದಾರೆಯೇ?” ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಪ್ರಶ್ನಿಸಿದ್ದಾರೆ. ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತಾವಧಿಯಲ್ಲಿ ನರೇಗಾ ಯೋಜನೆಯಡಿ ಬೋಗಸ್ ಬಿಲ್ ಸೃಷ್ಟಿಸಿ ಕೋಟಿಗಟ್ಟಲೆ ಹಣ ಲಪಟಾಯಿಸಲಾಗಿದೆ ಎಂದು ಕಿಡಿಕಾರಿದರು.
ಹಿಂದೆ ಬಿಲ್ ಪಾವತಿಯಲ್ಲಿ ವಿಳಂಬ ಮತ್ತು ಭ್ರಷ್ಟಾಚಾರವಿತ್ತು. ಆದರೆ ಈಗ ಮೋದಿ ಸರ್ಕಾರದಲ್ಲಿ ಕಾರ್ಮಿಕರ ಹಣ ನೇರವಾಗಿ ಅವರ ಖಾತೆಗೆ ಜಮಾ ಆಗುತ್ತಿದೆ. ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಹಾಕಲಾಗಿದೆ.
ಅಂದಿನ ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರೆ, ಇಂದಿನ ‘ನಕಲಿ ಗಾಂಧಿ’ಗಳು ಅಭಿವೃದ್ಧಿ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದಾರೆ. ದೇಶದಲ್ಲಿ ಈಗಾಗಲೇ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಶೀಘ್ರದಲ್ಲೇ ಕರ್ನಾಟಕದಲ್ಲೂ ಕಾಂಗ್ರೆಸ್ ನಿರ್ಣಾಮವಾಗಲಿದೆ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಜಿ. ಸೋಮಶೇಖರ್ ರೆಡ್ಡಿ, “ನರೇಂದ್ರ ಮೋದಿ ಅವರು ಕೇವಲ ವ್ಯಕ್ತಿಯಲ್ಲ, ಈ ದೇಶದ ಶಕ್ತಿ. ಅವರ ಆಡಳಿತದಲ್ಲಿ ಭಾರತ ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ,” ಎಂದು ಶ್ಲಾಘಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಸುರೇಶ್ ಬಾಬು ಸೇರಿದಂತೆ ಹಲವು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

