ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಟಿಬೆಟ್ ನಲ್ಲಿ ಬ್ರಹ್ಮಪುತ್ರ ನದಿಗೆ ಮೆಗಾ ಅಣೆಕಟ್ಟು ನಿರ್ಮಾಣ ಕಾಮಗಾರಿಯನ್ನು ಚೀನಾ ಆರಂಭಿಸಿದ್ದು, ಈ ಕುರಿತು ಭಾರತ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದೆ.
ಬ್ರಹ್ಮಪುತ್ರ ನದಿಯ ಮೇಲಿನ ಪ್ರದೇಶದಲ್ಲಿ ಕೈಗೊಳ್ಳಲಾಗುತ್ತಿರುವ ಬೃಹತ್ ಅಣೆಕಟ್ಟು ನಿರ್ಮಾಣದಿಂದ ಕೆಳ ಭಾಗದ ರಾಷ್ಟ್ರಗಳ ಹಿತಾಸಕ್ತಿಗಳಿಗೆ ಹಾನಿಯಾಗದಂತೆ ನೋಡಿಕೊಳುವಂತೆ ಚೀನಾವನ್ನು ಒತ್ತಾಯಿಸಿದೆ. ನಮ್ಮ ಹಿತಾಸಕ್ತಿ ರಕ್ಷಿಸಲು ಮೇಲ್ವಿಚಾರಣೆ ಮತ್ತು ಅಗತ್ಯ ಕ್ರಮ ತೆಗೆದುಕೊಳ್ಳುವುದನ್ನು ಮುಂದುವರೆಸುತ್ತೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಚೀನಾ ಅಣೆಕಟ್ಟು ನಿರ್ಮಾಣದಿಂದ ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ಪರಿಸರ ಸಮತೋಲನದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂಬ ಆತಂಕವಿದೆ.
ಬ್ರಹ್ಮಪುತ್ರ ನದಿಯ ನೀರನ್ನು ಬಳಸುವ ಕಾನೂನುಬದ್ಧ ಹಕ್ಕು ಪಡೆದಿರುವ ನದಿ ತಳಭಾಗದಲ್ಲಿರುವ ರಾಷ್ಟ್ರವಾಗಿ ತಜ್ಞರ ಮಟ್ಟದ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಚೀನಾದ ಮೆಗಾ ಅಣೆಕಟ್ಟು ನಿರ್ಮಾಣ ಯೋಜನೆ ಬಗ್ಗೆ ಅಭಿಪ್ರಾಯಗಳು ಮತ್ತು ಕಳವಳಗಳನ್ನು ನಿರಂತರವಾಗಿ ವ್ಯಕ್ತಪಡಿಸಿದ್ದೇವೆ. ಇತ್ತೀಚಿನ ಡ್ಯಾಂ ನಿರ್ಮಾಣ ಕಾಮಗಾರಿ ಆರಂಭ ವರದಿ ಹಿನ್ನೆಲೆಯಲ್ಲಿ ಪಾರದರ್ಶಕತೆ ಮತ್ತು ನದಿಯ ತಳಭಾಗದ ದೇಶಗಳೊಂದಿಗೆ ಸಮಾಲೋಚನೆಯ ಅಗತ್ಯತೆಯನ್ನು ಪುನರುಚ್ಚರಿಸಲಾಗಿದೆ ಎಂದು ಜೈಸ್ವಾಲ್ ಹೇಳಿದರು.
ಟಿಬೆಟ್‌ನಲ್ಲಿ ಬ್ರಹ್ಮಪುತ್ರ ನದಿಗೆ ವಿಶ್ವದ ಅತಿದೊಡ್ಡ ಅಣೆಕಟ್ಟನ್ನು ಭಾರತದ ಗಡಿಯ ಸಮೀಪದಲ್ಲಿ ನಿರ್ಮಿಸುವ ಯೋಜನೆಯನ್ನು ಡಿಸೆಂಬರ್ 25 ರಂದು ಚೀನಾ ಘೋಷಿಸಿತ್ತು. ಈ ಯೋಜನೆಗೆ ಸುಮಾರು 137 ಬಿಲಿಯನ್ ಡಾಲರ್ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.