ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ವಿಧಾನಸಭೆ ದೇಶದಲ್ಲಿಯೇ ಸರ್ವರ ಮೆಚ್ಚುಗೆ ಪಡೆದಿದೆ. ಇಂತಹ ವಿಧಾನಸಭೆ ಆಡಳಿತ ಸುಧಾರಣೆ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಕೇವಲ ಅಸೂಯೆಯಿಂದ ಸೃಷ್ಟಿಯಾದವುಗಳು. ಈ ಕುರಿತಂತೆ ಸಕಾರಾತ್ಮಕ ಚರ್ಚೆಗೆ ಸಿದ್ಧನಿದ್ದೇನೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನಲ್ಲಿಂದು ಸುದ್ದಿಗಾರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರೋ ಹೇಳಿದ ವಿಷಯಕ್ಕೆಲ್ಲ ಉತ್ತರಿಸಲು ಆಗುವುದಿಲ್ಲ. ನಾನು ಸಂವಿಧಾನ ಬದ್ಧವಾದ ಸ್ಪೀಕರ್ ಸ್ಥಾನದಲ್ಲಿದ್ದು, ಈ ಸ್ಥಾನಕ್ಕೆ ಅದರದ್ದೇ ಆದ ಗೌರವವಿದೆ. ಯಾವುದೇ ದೂರುಗಳಿದ್ದಲ್ಲಿ ಗುರುವಾರ ಬೆಳಗ್ಗೆ ತನ್ನ ಕಚೇರಿಯಲ್ಲಿ ಲಿಖಿತವಾಗಿ ಸಲ್ಲಿಸಲಿ. ತಾನು ಖುದ್ದಾಗಿ ದೂರು ಸ್ವೀಕರಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದರು. ಎಲ್ಲಾ ರೋಗಕ್ಕೂ ಮದ್ದು ಇದೆ. ಆದರೆ ಅಸೂಯೆಗೆ ಮದ್ದಿಲ್ಲ. ಈಗಿನ ಆರೋಪಗಳೆಲ್ಲವೂ ಅಸೂಯೆಯಿಂದ ಸೃಷ್ಟಿಯಾದಂತವುಗಳು ಎಂದು ಸ್ಪೀಕರ್ ಖಾದರ್ ಹೇಳಿದರು.
ನಾನು ಏನು, ಹೇಗೆ ಎನ್ನುವುದು ಗೊತ್ತಿದೆ, ನನ್ನ ವಿರುದ್ಧ ಆರೋಪ ಇದು ಮೊದಲಲ್ಲ. ನನ್ನ ರಾಜಕೀಯದುದ್ದಕ್ಕೂ ಈ ರೀತಿಯ ಆರೋಪ ಮಾಡಿದ್ದಾರೆ. ನಾನು ಮೊದಲ ಬಾರಿ ಶಾಸಕ ಆಗಿದಾಗಿಂದಲೂ ಈ ರೀತಿಯ ಮಾತುಗಳನ್ನು ಕೇಳಿದ್ದೇನೆ ಎಂದು ಯು.ಟಿ. ಖಾದರ್ ಹೇಳಿದರು.

