Sunday, September 21, 2025

ಮೈಸೂರು ದಸರಾ ಉದ್ಘಾಟನೆಗೆ ಕೌಂಟ್ ಡೌನ್ ಶುರು: ಚಾಮುಂಡಿ ಬೆಟ್ಟದಲ್ಲಿ ಭರದ ಸಿದ್ಧತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ನಾಳೆಯ ಉದ್ಘಾಟನೆಗಾಗಿ ಚಾಮುಂಡಿ ಬೆಟ್ಟದಲ್ಲಿ ಭರದಿಂದ ಸಿದ್ಧತೆ ನಡೆದಿದೆ. ಪ್ರತಿವರ್ಷದಂತೆ ಭಕ್ತಿಭಾವ ಮತ್ತು ಸಂಸ್ಕೃತಿ ವೈಭವದಿಂದ ಕೂಡಿದ ಈ ದಸರಾ ಉತ್ಸವವನ್ನು ರಾಜ್ಯದ ಜನತೆ ಮಾತ್ರವಲ್ಲದೆ ದೇಶ-ವಿದೇಶದ ಪ್ರವಾಸಿಗರೂ ಕಾತರದಿಂದ ನಿರೀಕ್ಷಿಸುತ್ತಿದ್ದಾರೆ.

ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಅರ್ಚಕರು ಶುಚಿಗೊಳಿಸಿ ಹಸಿರು ಸೀರೆಯುಡಿಸಿ ಸಜ್ಜುಗೊಳಿಸಿದ್ದಾರೆ. ನಾಳೆ ಮುಂಜಾನೆಯಿಂದಲೇ ವಿವಿಧ ಅಭಿಷೇಕ, ಪೂಜಾಕೈಂಕರ್ಯಗಳ ನಂತರ ಬೆಳ್ಳಿರಥದಲ್ಲಿ ಮೂರ್ತಿಯನ್ನು ವೇದಿಕೆಗೆ ತಂದು ಪುಷ್ಪಾರ್ಚನೆ ನಡೆಸಲಾಗುತ್ತದೆ. ಬೆಳಿಗ್ಗೆ 10:40ರ ವೃಶ್ಚಿಕ ಶುಭ ಲಗ್ನದಲ್ಲಿ ಲೇಖಕಿ ಭಾನುಮುಷ್ತಾಕ್ ಪುಷ್ಪಾರ್ಚನೆ ಮಾಡಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಚಾಮುಂಡಿ ಬೆಟ್ಟದ ದೇವಾಲಯ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಾಣವಾಗಿದ್ದು, 1 ಸಾವಿರಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಮಳೆಯ ಸಾಧ್ಯತೆ ಹಿನ್ನೆಲೆಯಲ್ಲಿ ಜರ್ಮನ್ ಟೆಂಟ್ ವ್ಯವಸ್ಥೆ ಮಾಡಲಾಗಿದೆ. ವಿಐಪಿ, ವಿವಿಐಪಿ ಹಾಗೂ ಪಾಸ್ ಹೊಂದಿದವರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಒದಗಿಸಲಾಗಿದೆ.

ಉದ್ಘಾಟನಾ ಕಾರ್ಯಕ್ರಮ ಮುಗಿಯುವವರೆಗೂ ಸಾಮಾನ್ಯ ಭಕ್ತರಿಗೆ ಚಾಮುಂಡಿ ಬೆಟ್ಟ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಆಹ್ವಾನಿತರಿಗೆ ಮಾತ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ದಸರಾ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕಿ ಭಾನುಮುಷ್ತಾಕ್ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು, ಶಾಸಕರು, ಸಂಸದರು ಪಾಲ್ಗೊಳ್ಳಲಿದ್ದಾರೆ. ಭದ್ರತೆಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಇದನ್ನೂ ಓದಿ