ಹೊಸದಿಗಂತ ವರದಿ, ಕಲಘಟಗಿ :
ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯದಲ್ಲಿ ಜನ ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಭಾನುವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಎರಡೂವರೆ ವರ್ಷದ ಆಡಳಿತದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಬಡ ರೈತರ ಸಮಸ್ಯೆಗಳಿಗೆ ಸ್ಪಂದನೆ ನೀಡುವಂತಹ ಯೋಗ್ಯತೆ ಕೂಡ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ, ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡರೂ ರೈತರ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಕಿಂಚಿತ್ತು ಕಾಳಜಿ ಇಲ್ಲ. ರಾಜು ಕಾಗೆ, ದೇಶಪಾಂಡೆ ಅವರಂತಹ ಆಡಳಿತ ಪಕ್ಷದ ಶಾಸಕರೇ ಈ ಸರ್ಕಾರದ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದಾರೆ. ನಾಡಿನ ಜನರ ಪಾಲಿಗೆ ಈ ಸರ್ಕಾರ ಬದುಕಿದ್ದು ಕೂಡ ಸತ್ತಂತೆ ಎಂದು ಟೀಕಿಸಿದರು.
ಬಳ್ಳಾರಿ ಘಟನೆಯಲ್ಲಿ ಆಡಳಿತ ಪಕ್ಷದ ಶಾಸಕ ಭರತ ರೆಡ್ಡಿಯವರ ಆಪ್ತನ ಖಾಸಗಿ ಅಂಗರಕ್ಷಕರೇ ಗುಂಡು ಹಾರಿಸಿ ಅವರ ಪಕ್ಷದ ಕಾರ್ಯಕರ್ತರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಕಾರಣರಾದವರನ್ನು ಬಂಧಿಸುವ ಬದಲು ಬಿಜೆಪಿ ಮುಖಂಡರ ಮೇಲೆ ಪ್ರಕರಣ ದಾಖಲಿಸುತ್ತಿದ್ದಾರೆ. ಇಂತಹ ಗೊಡ್ಡು ಬೆದರಿಕೆಗಳಿಗೆ ಬಿಜೆಪಿ ಹೆದರುವ ಪ್ರಶ್ನೆಯೇ ಇಲ್ಲ ಎಂದರು.

