ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಟಿ ಕೋಟಿ ಆರ್‌ಸಿಬಿ ಅಭಿಮಾನಿಗಳಿಗೆ ಕೊನೆಗೂ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2026ರ ಐಪಿಎಲ್ ಪಂದ್ಯಾವಳಿಗಳು ಸೇರಿದಂತೆ ಮುಂದಿನ ಎಲ್ಲಾ ಕ್ರಿಕೆಟ್ ಪಂದ್ಯಗಳನ್ನು ನಡೆಸಲು ಸಚಿವ ಸಂಪುಟವು ಬಹುತೇಕ ಒಪ್ಪಿಗೆ ನೀಡಿದೆ.
ಕಳೆದ ಜುಲೈನಲ್ಲಿ ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ 11 ಅಭಿಮಾನಿಗಳು ಸಾವನ್ನಪ್ಪಿದ ನಂತರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳನ್ನು ನಡೆಸುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದೇ ಕಾರಣದಿಂದ ರಾಜ್ಯಕ್ಕೆ ಮಹಿಳಾ ವಿಶ್ವಕಪ್‌ನಂತಹ ಪ್ರಮುಖ ಪಂದ್ಯಾವಳಿ ಕೂಡ ಕೈತಪ್ಪಿತ್ತು.
ಬೆಳಗಾವಿಯಲ್ಲಿ ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸಲು ಗೃಹ ಇಲಾಖೆಗೆ ಜವಾಬ್ದಾರಿ ವಹಿಸಿ, ಮೈಕೆಲ್ ಡಿ ಕುನ್ಹಾ ವರದಿಯ ಪ್ರಮುಖ ಶಿಫಾರಸುಗಳನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಳ್ಳಲು ಸಂಪುಟ ತೀರ್ಮಾನಿಸಿದೆ.
ಪಂದ್ಯಗಳು ನಡೆಯುವ ಸಂದರ್ಭದಲ್ಲಿ ಹೆಚ್ಚಿನ ಮತ್ತು ಬಿಗಿ ಭದ್ರತೆ ಒದಗಿಸುವ ಬಗ್ಗೆಯೂ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗಿದೆ. ಪಂದ್ಯದ ವೇಳೆ ಅನುಸರಿಸಬೇಕಾದ ಭದ್ರತಾ ಕ್ರಮಗಳ ಕುರಿತು ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿಯು ಗೃಹ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಬೇಕಿದೆ. ಈ ಚರ್ಚೆಯ ಬಳಿಕ, ಗೃಹ ಸಚಿವರ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆಸಿ ಅಂತಿಮ ತೀರ್ಮಾನವನ್ನು ಕೈಗೊಳ್ಳಲು ಸಂಪುಟ ನಿರ್ಧರಿಸಿದೆ.
ಈ ನಿರ್ಧಾರದಿಂದ ಕ್ರಿಕೆಟ್ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದು, ಮುಂಬರುವ ಪ್ರಮುಖ ಪಂದ್ಯಗಳನ್ನು ತಮ್ಮ ನೆಚ್ಚಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಣ್ತುಂಬಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

