ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದರ್ಶನ್ ಸುತ್ತಲಿನ ಬೆಳವಣಿಗೆಗಳು ಕಳೆದ ಕೆಲವು ತಿಂಗಳುಗಳಿಂದ ರಾಜ್ಯಾದ್ಯಂತ ಚರ್ಚೆಯ ವಿಷಯವಾಗಿವೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ಸಮಯದಲ್ಲೇ ಬಿಡುಗಡೆಯಾದ ದಿ ಡೆವಿಲ್ ಸಿನಿಮಾ, ಅಭಿಮಾನಿಗಳ ಬೆಂಬಲದಿಂದ ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ನಡುವೆ, ಬಹುಕಾಲ ಸಾರ್ವಜನಿಕವಾಗಿ ಮಾತನಾಡದೇ ಇದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಇದೀಗ ಮೊದಲ ಬಾರಿಗೆ ತಮ್ಮ ಮೌನವನ್ನು ಮುರಿದಿದ್ದಾರೆ.
‘ಡಿ ಕಂಪನಿ’ ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ವಿಜಯಲಕ್ಷ್ಮಿ, ದರ್ಶನ್ ಜೀವನದ ಸಂಕಷ್ಟದ ಹಂತ, ಕುಟುಂಬದ ಮನಸ್ಥಿತಿ ಹಾಗೂ ಅಭಿಮಾನಿಗಳ ಪಾತ್ರದ ಬಗ್ಗೆ ತೆರೆಯಾಗಿ ಮಾತನಾಡಿದ್ದಾರೆ. ನಟಿ ರಚನಾ ರೈ ನಡೆಸಿದ ಈ ಸಂದರ್ಶನದ ಪ್ರೋಮೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಂಪೂರ್ಣ ಸಂದರ್ಶನ ಬಿಡುಗಡೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ದಿ ಡೆವಿಲ್ ಚಿತ್ರದ ಯಶಸ್ಸು ದರ್ಶನ್ ಅಭಿಮಾನಿಗಳ ನಿಷ್ಠೆಗೆ ಸಾಕ್ಷಿ ಎಂದು ವಿಜಯಲಕ್ಷ್ಮಿ ಅಭಿಪ್ರಾಯಪಟ್ಟಿದ್ದಾರೆ.
ಅನಿರೀಕ್ಷಿತ ಘಟನೆ ಬಗ್ಗೆ ಮಾತನಾಡಿದ ಅವರು, ಈ ಪರಿಸ್ಥಿತಿಯನ್ನು ಕುಟುಂಬ ಎಂದಿಗೂ ಊಹಿಸಿರಲಿಲ್ಲ ಎಂದು ಹೇಳಿದ್ದಾರೆ. ನೆಗೆಟಿವ್ ಟೀಕೆಗಳು ತಮ್ಮ ಮೇಲೆ ಪರಿಣಾಮ ಬೀರುವುದಿಲ್ಲ, ಏಕೆಂದರೆ ಬಹುಪಾಲು ಜನರಿಂದ ಬಂದ ಪ್ರೀತಿ ಸಾಕು ಎಂದು ಸ್ಪಷ್ಟಪಡಿಸಿದ್ದಾರೆ. ದರ್ಶನ್ ಅಭಿಮಾನಿಗಳು ಮಹಿಳೆಯರಿಗೆ ಗೌರವ ನೀಡುವುದನ್ನು ಅರಿತಿದ್ದಾರೆ ಎಂಬ ನಂಬಿಕೆಯನ್ನೂ ಅವರು ವ್ಯಕ್ತಪಡಿಸಿದ್ದು, ಅಭಿಮಾನಿಗಳ ಮೂಲಕ ಸಮಾಜಮುಖಿ ಕೆಲಸಗಳ ಬಗ್ಗೆ ಕನಸನ್ನೂ ಹಂಚಿಕೊಂಡಿದ್ದಾರೆ. ಈ ಸಂದರ್ಶನ ಇದೀಗ ದರ್ಶನ್ ಕುಟುಂಬದ ಒಳನೋಟ ನೀಡುವ ಮಹತ್ವದ ದಾಖಲೆ ಆಗುತ್ತಿದೆ.

