Thursday, December 4, 2025

ಡಿ.17 ರಿಂದ ದರ್ಶನ್ ಕೇಸ್‌ನ ಟ್ರಯಲ್ ಆರಂಭ; ಪ್ರಾಸಿಕ್ಯೂಷನ್‌ಗೆ ಮಹತ್ವದ ಘಟ್ಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುಚರ್ಚಿತ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಡಿಸೆಂಬರ್ 17 ರಿಂದ 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ (ಸಿಸಿಹೆಚ್) ಕೋರ್ಟ್‌ನಲ್ಲಿ ಆರಂಭವಾಗಲಿದೆ. ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳ ವಿರುದ್ಧ ಪ್ರಾಸಿಕ್ಯೂಷನ್ ತನ್ನ ವಾದವನ್ನು ಮಂಡಿಸಲು ಸಿದ್ಧತೆ ನಡೆಸಿದೆ. ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿನ ಸಾಕ್ಷ್ಯಗಳನ್ನು ಕೋರ್ಟ್‌ನಲ್ಲಿ ಸಾಬೀತುಪಡಿಸುವುದು ಪ್ರಾಸಿಕ್ಯೂಷನ್ ಪಾಲಿಗೆ ಡಿಸೆಂಬರ್ 17 ರಿಂದ ಆರಂಭವಾಗುವ ಮಹತ್ವದ ಘಟ್ಟವಾಗಿದೆ.

ಕೋರ್ಟ್‌ನ ಜಡ್ಜ್ ಈರಪ್ಪಣ್ಣ ಪವಡಿ ನಾಯ್ಕ್ ಅವರು ಟ್ರಯಲ್‌ಗೆ ದಿನಾಂಕ ನಿಗದಿಪಡಿಸಿದ್ದು, ಮೊದಲ ಹಂತವಾಗಿ ಇಬ್ಬರು ಪ್ರಮುಖ ಸಾಕ್ಷಿಗಳಿಗೆ ಸಮನ್ಸ್ ಜಾರಿಗೊಳಿಸಿದ್ದಾರೆ. ಡಿಸೆಂಬರ್ 17 ರಂದು ಮೃತರಾದ ರೇಣುಕಾಸ್ವಾಮಿ ಅವರ ತಂದೆ ಕಾಶಿನಾಥಯ್ಯ ಶಿವನಗೌಡ್ರು (ಸಾಕ್ಷಿ-7) ಮತ್ತು ತಾಯಿ ರತ್ನಪ್ರಭಾ (ಸಾಕ್ಷಿ-8) ಅವರ ಹೇಳಿಕೆಯನ್ನು ಕೋರ್ಟ್ ದಾಖಲಿಸಿಕೊಳ್ಳಲಿದೆ. ಇವರ ಹೇಳಿಕೆ ಬಳಿಕ ಆರೋಪಿಗಳ ಪರ ವಕೀಲರು ಪಾಟೀಸವಾಲು ನಡೆಸಲಿದ್ದಾರೆ.

ಈ ಹೈ-ಪ್ರೊಫೈಲ್ ಕೇಸ್‌ನಲ್ಲಿ ಎರಡೂ ಕಡೆಯಿಂದ ದಿಗ್ಗಜ ವಕೀಲರು ವಾದ ಮಂಡಿಸಲಿದ್ದಾರೆ.

ಆರೋಪಿ ದರ್ಶನ್ ಪರ: ಹಿರಿಯ ವಕೀಲ ಸಿ.ವಿ. ನಾಗೇಶ್ ವಕಾಲತ್ತು ವಹಿಸುವುದು ಬಹುತೇಕ ಖಚಿತವಾಗಿದೆ.

ಆರೋಪಿ ಪವಿತ್ರಾ ಗೌಡ ಪರ: ವಕೀಲ ಬಾಲನ್ ವಾದ ಮಂಡಿಸಲಿದ್ದಾರೆ.

ಪ್ರಾಸಿಕ್ಯೂಷನ್ (ಸರ್ಕಾರ) ಪರ: ವಿಶೇಷ ಸರ್ಕಾರಿ ಅಭಿಯೋಜಕರಾಗಿ (ಎಸ್ಪಿಪಿ) ಪಿ. ಪ್ರಸನ್ನ ಕುಮಾರ್ ವಾದ ಮಂಡಿಸಲಿದ್ದಾರೆ.

ಈ ಟ್ರಯಲ್ ಪ್ರಕ್ರಿಯೆಯಲ್ಲಿ ಪ್ರಾಸಿಕ್ಯೂಷನ್ ತನ್ನ ಸಾಕ್ಷ್ಯಗಳನ್ನು ಒಂದೊಂದಾಗಿ ಸಾಬೀತುಪಡಿಸಬೇಕಿದೆ. ಸಾಕ್ಷ್ಯಗಳು ಕೋರ್ಟ್‌ನಲ್ಲಿ ದೃಢಪಟ್ಟರೆ ಮಾತ್ರ ಆರೋಪಿಗಳು ತಪ್ಪಿತಸ್ಥರೆಂದು ಪರಿಗಣಿಸಲಾಗುತ್ತದೆ. ಹೀಗಾಗಿ, ದರ್ಶನ್ ಮತ್ತು ಇತರ ಆರೋಪಿಗಳ ಭವಿಷ್ಯದ ದೃಷ್ಟಿಯಿಂದ ಡಿಸೆಂಬರ್ 17 ಅತ್ಯಂತ ಮಹತ್ವದ ದಿನವಾಗಿದೆ.

error: Content is protected !!