ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರುವ ನಟ ದರ್ಶನ್‌ಗೆ ಕನಿಷ್ಠ ಸೌಲಭ್ಯಗಳೂ ದೊರೆಯುತ್ತಿಲ್ಲ ಎಂಬ ಆಕ್ಷೇಪಣೆ ನ್ಯಾಯಾಲಯದ ಮುಂದೆ ಕೇಳಿಬಂದಿದೆ. ಹಾಸಿಗೆ, ತಲೆದಿಂಬು, ಹೊದಿಕೆ ಸೇರಿದಂತೆ ಸಾಮಾನ್ಯ ಕೈದಿಗೆ ದೊರೆಯುವ ಸೌಲಭ್ಯ ನೀಡದೇ ಅಧಿಕಾರಿಗಳು ಅನ್ಯಾಯ ಮಾಡುತ್ತಿದ್ದಾರೆ ಎಂದು ನಟನ ಪರ ವಕೀಲರು ಮಂಗಳವಾರ 64ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ನಲ್ಲಿ ದೂರಿದರು.
ವಿಚಾರಣೆಯಲ್ಲಿ ದರ್ಶನ್ ಪರ ವಕೀಲರು, ವಿಚಾರಣಾಧೀನ ಕೈದಿಗೆ ಕಾನೂನು ಪ್ರಕಾರ ನೀಡಬೇಕಾದ ಸೌಲಭ್ಯವನ್ನು ನಿರಾಕರಿಸಲು ಅಧಿಕಾರಿಗಳಿಗೆ ಹಕ್ಕಿಲ್ಲ ಎಂದು ವಾದಿಸಿದರು. ದರ್ಶನ್ ಶೂ ಧರಿಸಿದ್ದರೆ ಅದನ್ನೂ ಬಿಚ್ಚಿಸುತ್ತಾರೆ, ಊಟದ ತಟ್ಟೆಯನ್ನು ಕೊಠಡಿಗೆ ಎಸೆದು ಹೋಗುತ್ತಾರೆ ಎಂಬ ಆರೋಪವನ್ನು ಅವರು ಮಂಡಿಸಿದರು. ಈ ಕುರಿತು ನ್ಯಾಯಾಧೀಶರು ಜೈಲು ಅಧಿಕಾರಿಗಳಿಗೆ ಅಧಿಕೃತ ಮನವಿ ಸಲ್ಲಿಸಿದ್ದೀರಾ ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ವಕೀಲರು, ಮೌಖಿಕ ಮನವಿಗಳನ್ನು ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ಎಂದು ಹೇಳಿದರು.
ಸರ್ಕಾರದ ಪರ ವಾದ ಮಂಡಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್, ದರ್ಶನ್ ಜೈಲಿಗೆ ಸೇರಿದ ಎರಡು ದಿನಗಳಲ್ಲೇ ಅರ್ಜಿ ಸಲ್ಲಿಸಲಾಗಿದ್ದು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಿಗೆ ಕೈದಿಗಳ ಖರ್ಚಿನಲ್ಲಿ ಹಾಸಿಗೆ-ಹೊದಿಕೆ ಒದಗಿಸುವ ಅವಕಾಶವಿಲ್ಲ ಎಂದು ವಿವರಿಸಿದರು. ಆರೋಪಿಗಳಿಗೆ ಕಾನೂನಿಗಿಂತ ಹೆಚ್ಚಿನ ಸೌಲಭ್ಯ ನೀಡುವ ಪ್ರಶ್ನೆಯೇ ಇಲ್ಲ, ಅಗತ್ಯವಿದ್ದರೆ ಅವರನ್ನು ಬೇರೆ ಜೈಲಿಗೆ ಸ್ಥಳಾಂತರಿಸುವ ಆಡಳಿತಾತ್ಮಕ ಹಕ್ಕು ಅಧಿಕಾರಿಗಳಿಗೆ ಇದೆ ಎಂದರು.
ಬಳ್ಳಾರಿ ಜೈಲಿಗೆ ಸ್ಥಳಾಂತರದ ಮನವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ದರ್ಶನ್ ಪರ ವಕೀಲರು, ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿದರೂ ಸ್ಥಳಾಂತರದ ಕುರಿತು ಯಾವುದೇ ಆದೇಶ ನೀಡಿಲ್ಲ ಎಂದು ವಾದಿಸಿದರು. ಬಳ್ಳಾರಿ ಮತ್ತು ಬೆಂಗಳೂರಿನ ನಡುವೆ 310 ಕಿಲೋಮೀಟರ್ ಅಂತರ ಇರುವುದರಿಂದ ಪ್ರತಿ ಬಾರಿ ವಿಚಾರಣೆಗೆ ಹಾಜರಾಗುವುದು ಅಸಾಧ್ಯ. ವಿಸಿ ಮೂಲಕ ವಿಚಾರಣೆ ನಡೆಸುವುದು ಸೂಕ್ತವಲ್ಲ, ವಕೀಲರ ಜತೆ ಆರೋಪಿ ನೇರವಾಗಿ ಮಾತನಾಡುವ ಅಗತ್ಯವಿದೆ ಎಂದು ವಾದಿಸಿದರು.
ದೀರ್ಘಕಾಲದ ವಾದ-ಪ್ರತಿವಾದ ಆಲಿಸಿದ ನಂತರ, ನ್ಯಾಯಾಲಯ ವಿಚಾರಣೆಯನ್ನು ಬುಧವಾರ ಸಂಜೆ ನಾಲ್ಕು ಗಂಟೆಗೆ ಮುಂದೂಡಿತು. ಪ್ರಕರಣದ ತೀರ್ಮಾನಕ್ಕಾಗಿ ಎಲ್ಲರ ಗಮನ ಇದೀಗ ಕೋರ್ಟ್ ತೀರ್ಪಿನತ್ತ ನೆಟ್ಟಿದೆ.