ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನಾಂಬೆಯ ದರ್ಶನೋತ್ಸವ ಅ. 9 ರಿಂದ 23ರವರೆಗೆ ನಡೆಯಲಿದೆ. ಶ್ರೀ ಹಾಸನಾಂಬ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಅ.10ರಿಂದ 22ರ ತನಕ ಸಾರ್ವಜನಿಕರಿಗೆ ದರುಶನಕ್ಕೆ ಅವಕಾಶವಿರಲಿದೆ. ರಾಜ್ಯ ಸೇರಿ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ದೇಗುಲಕ್ಕೆ ಬರುವುದರಿಂದ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಈ ಬಾರಿ ದರುಶನಕ್ಕೆ ಸಂಬಂಧಿಸಿ ಕೆಲ ಬದಲಾವಣೆ ಮಾಡಲಾಗಿದೆ.
ಈ ಬಾರಿಯ ಆಚರಣೆಗೆ ಜಿಲ್ಲಾಡಳಿತದಿಂದ ಭಾರೀ ಷರತ್ತು ವಿಧಿಸಲಾಗಿದೆ. ಎಲ್ಲ ಭಕ್ತರೂ ಸಾಂಪ್ರದಾಯಿಕ ಉಡುಗೆಗಳನ್ನೇ ಧರಿಸಿಕೊಂಡು ಬರಬೇಕು. ಜೊತೆಗೆ, ವಿಐಪಿ ಟಿಕೆಟ್, ಹಣಕ್ಕೆ ಖರೀದಿಸಿದ ವಿಶೇಷ ದರುಶನ ಟಿಕೆಟ್ ಹಾಗೂ ಧರ್ಮದರುಶನ ಮಾಡುವ ಭಕ್ತರಿಗೆ ಪ್ರತ್ಯೇಕ ಸಮಯ ಮತ್ತು ಸರತಿ ಸಾಲುಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಈ ಬಾರಿ ಜಾತ್ರೆಯನ್ನು ಅತ್ಯಂತ ಸಡಗರ ಮತ್ತು ಸಂತೋಷದಿಂದ ಆಚರಿಸಲಾಗುತ್ತಿದೆ. ಜಿಲ್ಲಾಡಳಿತವು ಭರದಿಂದ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ಭಕ್ತರಿಗೆ ಸುಗಮ ದರುಶನಕ್ಕೆ ಅತ್ಯಾಧುನಿಕ ವ್ಯವಸ್ಥೆಗಳನ್ನು ಮಾಡಲಾಗಿದೆ. ಭಕ್ತರ ಅನುಕೂಲಕ್ಕಾಗಿ ಹಲವು ಹೊಸ ಬದಲಾವಣೆಗಳನ್ನು ಮತ್ತು ತಂತ್ರಜ್ಞಾನಗಳನ್ನು ಪರಿಚಯಿಸಲಾಗಿದೆ ಎಂದು ಮಾಹಿತಿ ನೀಡಿದರು.
ದರುಶನಕ್ಕೆ ಸಮಯ ನಿಗದಿ, ಕ್ಯೂ ವ್ಯವಸ್ಥೆಯಲ್ಲಿ ಬದಲಾವಣೆ
ಭಕ್ತರು ಯಾವುದೇ ಗೊಂದಲವಿಲ್ಲದೆ ದೇವಿಯ ದರ್ಶನ ಪಡೆಯಲು ವ್ಯವಸ್ಥಿತ ಕ್ಯೂಗಳನ್ನು ಮಾಡಲಾಗಿದೆ:
- ಸಾಮಾನ್ಯ ದರುಶನಕ್ಕೆ ಒಂದು ಸರತಿ ಸಾಲು
- ಟಿಕೆಟ್ ಖರೀದಿಸಿ ಬರುವವರಿಗೆ ದೇವಿ ದರುಶನಕ್ಕೆ ಎರಡು ಪ್ರತ್ಯೇಕ ಸರತಿ ಸಾಲುಗಳು.
- ಗಣ್ಯರಿಗೆ ಅಂದರೆ ಶಿಷ್ಟಾಚಾರದ ದರುಶನಕ್ಕೆ ಬರುವವರಿಗೆ ಮತ್ತೊಂದು ಪ್ರತ್ಯೇಕ ಸರತಿ ಸಾಲು ಮಾಡಲಾಗಿದೆ.
ವಿಐಪಿ/ಶಿಷ್ಟಾಚಾರ ದರುಶನಕ್ಕೆ ಸಮಯ ನಿಗದಿ:
ಗೋಲ್ಡ್ ಕಾರ್ಡ್ ಪಡೆದವರಿಗೆ: ಬೆಳಿಗ್ಗೆ 7.30 ರಿಂದ 10 ಗಂಟೆಯವರೆಗೆ ಸಮಯ ನಿಗದಿ ಮಾಡಲಾಗಿದೆ.
ವಿಐಪಿಗಳಿಗೆ ಮಾತ್ರ: ಬೆಳಿಗ್ಗೆ 10.30 ರಿಂದ 12.30 ರವರೆಗೆ ದರುಶನಕ್ಕೆ ಅವಕಾಶವಿರುತ್ತದೆ.
ಶಿಷ್ಟಾಚಾರ ಅನ್ವಯವಾಗುವುದು ಕೇವಲ 5ರಿಂದ, 6 ಗಣ್ಯರಿಗೆ ಮಾತ್ರ. ವಿವಿಐಪಿಗಳು ತಮ್ಮ ಜೊತೆಯಲ್ಲಿ ಕೇವಲ 4 ನಾಲ್ಕು ಜನರನ್ನು ಮಾತ್ರ ಕರೆದುಕೊಂಡು ಬರಬಹುದು.
ಉಳಿದ ಸಮಯದಲ್ಲಿ ಸಾಮಾನ್ಯ ಭಕ್ತರಿಗೆ ದರುಶನಕ್ಕೆ ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಕಳೆದ ವರ್ಷ ವಿಐಪಿ ದರುಶನಕ್ಕೆ ವ್ಯಾಪಕ ಸಾರ್ವಜನಿಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ಈ ಬಾರಿ ಸಂಸ್ಕೃತಿ ಇರುವುದಿಲ್ಲ ಎಂದು ಕಂದಾಯ ಸಚಿವರು ಮತ್ತು ಹಾಸನ ಜಿಲ್ಲಾ ಉಸ್ತುವಾರಿಯೂ ಆಗಿರುವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ರಾಜ್ಯಪಾಲರು, ಸಿಎಂ, ಡಿಸಿಎಂ, ಗೃಹಸಚಿವರು, ಮಾಜಿ ಪ್ರಧಾನಿಗಳು, ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರಿಗೆ ಮಾತ್ರ ವಿಐಪಿ ದರ್ಶನದ ವ್ಯವಸ್ಥೆ ಇರಲಿದೆ ಎಂದು ತಿಳಿಸಿದ್ದಾರೆ.
ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕುಡಿಯುವ ನೀರು, ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಸುಮಾರು 120 ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದ್ದು, ಅವುಗಳ ನಿರ್ವಹಣೆಗೆ ಓರ್ವ ಸಿಬ್ಬಂದಿ ನಿಯೋಜಿಸಲಾಗಿದೆ. ಆರೋಗ್ಯ ಇಲಾಖೆ, ಅಗ್ನಿಶಾಮಕದಳ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ರೀತಿಯ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.
ಇನ್ನು ಹಾಸನಾಂಬ ದೇವಾಲಯಕ್ಕೆ ಬರುವವರು ಕಡ್ಡಾಯವಾಗಿ ಸಾಂಪ್ರದಾಯಿಕ ಉಡುಗೆಯಲ್ಲಿ ಬರಬೇಕು. ಅಲ್ಲದೆ, ಸಚಿವರು ಮತ್ತು ವಿಐಪಿಗಳು ತಮ್ಮ ವಾಹನಗಳನ್ನು ಐಬಿಯಲ್ಲಿ ನಿಲ್ಲಿಸಿ, ಜಿಲ್ಲಾಡಳಿತದ ವಾಹನದಲ್ಲಿ ದೇವಾಲಯಕ್ಕೆ ತೆರಳಬೇಕು ಎಂದು ತಿಳಿಸಿದರು. ದೇವಸ್ಥಾನದ ಸುತ್ತಲೂ ಪಾದರಕ್ಷೆಗಳನ್ನು ಬಿಡುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ಭಕ್ತರಿಗೆ ಸೂಚನೆ ನೀಡಿದ್ದಾರೆ.