ಹೊಸದಿಗಂತ ಡಿಜಿಟಲ್ ಡೆಸ್ಕ್:
ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ತಮ್ಮ 25 ವರ್ಷಗಳ ವೈವಾಹಿಕ ಜೀವನದಲ್ಲಿ ಮೊದಲ ಬಾರಿಗೆ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ನಟಿ ರಚನಾ ರೈ ಅವರು ನಡೆಸಿದ ಈ ಸಂದರ್ಶನದಲ್ಲಿ ವಿಜಯಲಕ್ಷ್ಮಿ ಅವರು ದರ್ಶನ್ ಅವರ ವೈಯಕ್ತಿಕ ಜೀವನದ ಏರಿಳಿತಗಳು ಮತ್ತು ಇತ್ತೀಚಿನ ಕಷ್ಟದ ಪರಿಸ್ಥಿತಿಯ ಕುರಿತು ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಬೆನ್ನುನೋವು ಮತ್ತು ಸರ್ಜರಿಯ ಮಾತುಕತೆ:
ದರ್ಶನ್ ಅವರಿಗೆ ನಿಜವಾಗಿಯೂ ಬೆನ್ನುನೋವು ಇದೆ ಎಂದು ವಿಜಯಲಕ್ಷ್ಮಿ ದೃಢಪಡಿಸಿದ್ದಾರೆ. ‘ಡೆವಿಲ್’ ಚಿತ್ರೀಕರಣದ ನಂತರ ಸರ್ಜರಿ ಮಾಡಿಸಲು ನಿರ್ಧರಿಸಲಾಗಿತ್ತು. ವೈದ್ಯರು ಆರು ತಿಂಗಳಿಂದ ಒಂದು ವರ್ಷದವರೆಗೆ ಸಂಪೂರ್ಣ ವಿಶ್ರಾಂತಿ ಅಗತ್ಯ ಎಂದಿದ್ದರು. ವಿದೇಶದಲ್ಲಿ ಸರ್ಜರಿ ಮಾಡಿಸಲು ತೀರ್ಮಾನಿಸಲಾಗಿತ್ತು ಮತ್ತು ದುಬೈನ ವೈದ್ಯರೊಂದಿಗೆ ಮಾತುಕತೆ ಕೂಡ ನಡೆದಿತ್ತು. ಆದರೆ, ‘ಡೆವಿಲ್’ ಚಿತ್ರೀಕರಣ ಮುಗಿದ ನಂತರ ಸರ್ಜರಿ ಮಾಡಿಸಿಕೊಳ್ಳುವ ಯೋಜನೆ ಇತ್ತು. ಇದೀಗ ದರ್ಶನ್ ಅವರು ಜೈಲಿನಲ್ಲಿಯೂ ಬೆನ್ನುನೋವಿನಿಂದ ನರಳುತ್ತಿದ್ದಾರೆ ಎಂದು ವಿಜಯಲಕ್ಷ್ಮಿ ನೋವು ವ್ಯಕ್ತಪಡಿಸಿದ್ದಾರೆ.
ಬೇಲ್ ರದ್ದಾದಾಗ ದರ್ಶನ್ ಪ್ರತಿಕ್ರಿಯೆ:
ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಅವರ ಬೇಲ್ ರದ್ದಾದ ಸಂದರ್ಭವನ್ನು ನೆನಪಿಸಿಕೊಂಡ ವಿಜಯಲಕ್ಷ್ಮಿ, ಈ ವಿಷಯವನ್ನು ತಾವೇ ಫೋನ್ ಮೂಲಕ ದರ್ಶನ್‌ಗೆ ತಿಳಿಸಿದ್ದರು ಎಂದು ಹೇಳಿದ್ದಾರೆ. ಸುದ್ದಿ ಕೇಳಿದ ಕೂಡಲೇ ದರ್ಶನ್ ಅವರು ಸಂಪೂರ್ಣ ಮೌನಕ್ಕೆ ಜಾರಿದ್ದರು. ಬಳಿಕ, “ಆಯಿತು, ಬ್ಯಾಗ್ ರೆಡಿ ಮಾಡು, ಬರುತ್ತೇನೆ,” ಎಂದು ಹೇಳಿ, “ಅಳುತ್ತಾ ಕೂರಬೇಡ. ನೀನು ಹುಷಾರು, ಮಗನನ್ನು ಚೆನ್ನಾಗಿ ನೋಡಿಕೊ,” ಎಂದು ಧೈರ್ಯ ತುಂಬಿದ್ದರು ಎಂದಿದ್ದಾರೆ.
ತಮ್ಮ ವೈಯಕ್ತಿಕ ನೋವುಗಳ ಬಗ್ಗೆ ಮಾತನಾಡಿದ ವಿಜಯಲಕ್ಷ್ಮಿ, “ನನಗೆ ನೋವಾದಾಗ ಗರಿಷ್ಠ ಹತ್ತು ದಿನ ಅಳುತ್ತೇನೆ. ಆಮೇಲೆ ನಾನೇ ಸಮಾಧಾನ ಮಾಡಿಕೊಂಡು ಎದ್ದು ನಿಲ್ಲುತ್ತೇನೆ,” ಎಂದು ತಮ್ಮ ಮಾನಸಿಕ ಸ್ಥೈರ್ಯವನ್ನು ವಿವರಿಸಿದ್ದಾರೆ.
ದರ್ಶನ್ ಅಭಿಮಾನಿಗಳನ್ನು ಟಾರ್ಗೆಟ್ ಮಾಡುತ್ತಿರುವ ಬಗ್ಗೆ ವಿಜಯಲಕ್ಷ್ಮಿ ಸಮರ್ಥನೆಯ ಮಾತುಗಳನ್ನಾಡಿದ್ದಾರೆ. “ದರ್ಶನ್ ಫ್ಯಾನ್ಸ್ ತಪ್ಪಾಗಿ ನಡೆದುಕೊಳ್ಳುವುದಿಲ್ಲ, ನೂಕು ನುಗ್ಗಲು ಇರುವುದಿಲ್ಲ,” ಎಂದಿದ್ದಾರೆ. ತಾವು ಸಾಮಾನ್ಯ ಜನರ ನಡುವೆ ಸಿನಿಮಾ ನೋಡಿದ್ದರೂ ಯಾವುದೇ ಕೆಟ್ಟ ಅನುಭವ ಆಗಿಲ್ಲ ಎಂದು ಹೇಳಿದ್ದಾರೆ. “ಹೆಣ್ಣುಮಕ್ಕಳನ್ನು ಹೇಗೆ ನೋಡಬೇಕು ಎಂದು ದರ್ಶನ್ ಫ್ಯಾನ್ಸ್‌ಗೆ ಗೊತ್ತು. ಸೋಷಿಯಲ್ ಮೀಡಿಯಾದಲ್ಲಿ ಫೇಕ್ ಅಕೌಂಟ್‌ಗಳನ್ನು ಮಾಡಿ ಕೆಟ್ಟ ಮೆಸೇಜ್ ಕಳುಹಿಸಬಹುದು, ಆದರೆ ಅವರು ದರ್ಶನ್ ಫ್ಯಾನ್ಸ್ ಅಂತ ಹೇಗೆ ಹೇಳುತ್ತಾರೆ?” ಎಂದು ಪ್ರಶ್ನಿಸಿದ್ದಾರೆ. ದರ್ಶನ್ ಅವರ ಅಭಿಮಾನಿಗಳು ತೋರುವ ಪ್ರೀತಿ ಎಂದಿಗೂ ಮರೆಯಲಾಗದು, ಅಂತಹ ಫ್ಯಾನ್ಸ್ ಸಿಗುವುದು ತುಂಬಾ ಕಷ್ಟ ಎಂದು ಹೇಳಿ ತಮ್ಮ ಅಭಿಮಾನಿ ಬಳಗದ ಮೇಲಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

