ಹೊಸದಿಗಂತ ಡಿಜಿಟಲ್ ಡೆಸ್ಕ್:
ನವರಾತ್ರಿಯ 10ನೇ ದಿನ ಇಂದು ಅರಮನೆಯಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಾಂಪ್ರದಾಯಿಕ ಆಯುಧ ಪೂಜೆಯ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು.
ಅರಮನೆಯಲ್ಲಿ ಇಂದು ಆಯುಧ ಪೂಜೆಯ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇಶದಲ್ಲೇ ಇಂದಿಗೂ ರಾಜಪರಂಪರೆಯಂತೆ ಸಾಂಪ್ರದಾಯಿಕ ಆಯುಧ ಪೂಜೆ ನಡೆಯುವುದು ಮೈಸೂರಿನ ಅರಮನೆಯಲ್ಲಿ ಮಾತ್ರ. ಈ ಹಿನ್ನೆಲೆ ಬೆಳಗ್ಗೆಯಿಂದಲೇ ಆಯುಧ ಪೂಜಾ ಕಾರ್ಯಕ್ರಮಗಳು ಜರುಗಿದವು.
ಬೆಳಗ್ಗೆ 6 ಗಂಟೆಗೆ ಅರಮನೆ ಒಳಗೆ ಚಂಡಿಕಾ ಹೋಮ ಆರಂಭವಾಗಿ, ನಂತರ 7:30 ರಿಂದ 7:42ರವರೆಗೆ ಪಟ್ಟದ ಕತ್ತಿ ಹಾಗೂ ಖಾಸಗಿ ಆಯುಧಗಳನ್ನು ಅರಮನೆಯ ಆನೆ ಬಾಗಿಲಿನ ಮೂಲಕ ಕೋಡಿ ಸೋಮೇಶ್ವರ ದೇವಾಲಯಕ್ಕೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ ಹಾಗೂ ಒಂಟೆ ಪಲಕ್ಕಿಯೊಂದಿಗೆ ತರಲಾಯಿತು. ಬಳಿಕ ಅಲ್ಲಿನ ಬಾವಿಯಲ್ಲಿ ನೀರನ್ನು ತೆಗೆದು ಇವುಗಳನ್ನು ಸ್ವಚ್ಛಗೊಳಿಸಲಾಯಿತು. ಖಾಸಗಿ ಆಯುಧಗಳನ್ನು ಆನೆ ಬಾಗಿಲಿನ ಮೂಲಕ ವಾಪಸ್ ಕಲ್ಯಾಣದ ಆವರಣಕ್ಕೆ ತರಲಾಯಿತು. ಬಳಿಕ 9:15ಕ್ಕೆ ಚಂಡಿಕಾ ಹೋಮ ಪೂರ್ಣಾಹುತಿ ಆಯಿತು.
ಆಯುಧ ಪೂಜೆ ಆದ ನಂತರ ಇಂದು ಚಿನ್ನದ ಸಿಂಹಾಸನಕ್ಕೆ ಅಳವಡಿಸಿರುವ ಸಿಂಹವನ್ನು ವಿಸರ್ಜನೆ ಮಾಡಲಾಗುತ್ತದೆ. ನಂತರ ಯದುವೀರ್ ಹಾಗೂ ತ್ರಿಷಿಕ ಕುಮಾರಿ ಒಡೆಯರ್ ನವರಾತ್ರಿಯ ಮೊದಲ ದಿನ ಕಂಕಣ ಧಾರಣೆ ಮಾಡಿರುವ ಕಂಕಣವನ್ನು ದೇವರ ಮನೆಯಲ್ಲಿ ವಿಸರ್ಜನೆ ಮಾಡಿ ದೇವರ ದರ್ಶನ ಪಡೆಯುತ್ತಾರೆ. ಬಳಿಕ ಈ ವರ್ಷದ ಖಾಸಗಿ ದರ್ಬಾರಿಗೆ ತೆರೆ ಬೀಳಲಿದೆ.