ಹೊಸದಿಗಂತ ವರದಿ ಬೆಳಗಾವಿ/ ಅಥಣಿ :
ಮಾಜಿ ಡಿಸಿಎಂ, ಹಾಲಿ ಶಾಸಕ ಲಕ್ಷ್ಮಣ ಸವದಿ, ಪುತ್ರ ಚಿದಾನಂದ ಸವದಿ ಹಾಗೂ ಬೆಂಬಲಿಗರು ಸೇರಿ ಡಿಸಿಸಿ ಬ್ಯಾಂಕ್ ಯೂನಿಯನ್ ಅಧ್ಯಕ್ಷ ನಿಂಗಪ್ಪ ಕೆರಣ್ಣವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆನ್ನುವ ಆರೋಪ ಕೇಳಿ ಬಂದಿದೆ.
ಶಾಸಕ ಲಕ್ಷ್ಮಣ ಸವದಿ ಈ ಆರೋಪ ಸುಳ್ಳು ಯಾರೋ ಬೇಕು ಅಂತ ನಮ್ಮ ಹೆಸರು ಹಾಳು ಮಾಡುವುದಕ್ಕೆ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆಂದು ಹೇಳಿಕೆ ನೀಡಿದ್ದಾರೆ.
ಅಥಣಿ ಪಟ್ಟಣದಲ್ಲಿರುವ ಶಾಸಕ ಲಕ್ಷ್ಮಣ ಸವದಿ ನಿವಾಸದಲ್ಲಿ ಶನಿವಾರ ಬೆಳಗ್ಗೆ ಡಿಸಿಸಿ ಬ್ಯಾಂಕ್ ನೌಕರರ ಒಕ್ಕೂಟದ ಅಧ್ಯಕ್ಷ ನಿಂಗಪ್ಪ ಕರೆಣ್ಣವರ್ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಗಂಭೀರ ಆರೋಪ ಕೇಳಿಬಂದಿದೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಾರಕಿಹೊಳಿ ಪರ ಕೆಲಸ ಮಾಡಿದ್ದು ಹಾಗೂ ಸವದಿ ಅಳಿಯನ ವರ್ಗಾವಣೆ ವಿಚಾರವಾಗಿ ತಮ್ಮ ಮೇಲೆ ಹಗೆತನವಿತ್ತು ಎಂದು ಕರೆಣ್ಣವರ್ ಆರೋಪಿಸಿದ್ದಾರೆ.
ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಹಾಗೂ ಬೆಂಬಲಿಗರು ಸೇರಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆ ಗೊಳಗಾದ ವ್ಯಕ್ತಿ ಗಂಭೀರವಾಗಿ ಆರೋಪಿಸಿದ್ದಾರೆ.
ಹಲ್ಲೆಯಿಂದ ತಲೆಗೆ ಬಲವಾದ ಗಾಯವಾಗಿ ರಕ್ತಸ್ರಾವಕ್ಕೊಳಗಾಗಿರುವ ಅವರು ಸದ್ಯ ಅಥಣಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಾನು ಸತ್ತರೆ ಅದಕ್ಕೆ ಸವದಿಯಯೇ ಕಾರಣ ಎಂದು ವಿಡಿಯೋ ಹೇಳಿಕೆ ನೀಡುವುದರ ಮೂಲಕ ಸವದಿ ಸವದಿ ಪ್ರತ್ರನ ವಿರುದ್ದ ಗಂಭೀರವಾಗಿ ಆರೋಪಿಸಿದ್ದಾರೆ.
ಹಲ್ಲೆಯ ಆರೋಪದ ವಿಚಾರಕ್ಕೆ ಮಾಧ್ಯಮಗಳೊಂದಿಗೆ ಮಾತನಾಡಿ ಶಾಸಕ ಲಕ್ಷ್ಮಣ ಸವದಿ, ಅವರು ಇದೊಂದು ರಾಜಕೀಯ ಪ್ರೇರಿತ ಆರೋಪವಾಗಿದೆ. ಯೂನಿಯನ್ ಆಂತರಿಕ ಹಣಕಾಸಿನ ಭಿನ್ನಾಭಿಪ್ರಾಯಗಳ ಚರ್ಚೆಗೆ ಕರಣ್ಣವರ್ ನಮ್ಮ ಮನೆಗೆ ಬಂದಿದ್ದಾಗ, ಹೊರಗಿದ್ದ ಕಾರ್ಯಕರ್ತ ಶ್ರೀಕಾಂತ್ ಆಲಗೂರ ಎಂಬುವವರ ಜೊತೆ ಮಾತಿನ ಚಕಮಕಿ ನಡೆದಿದೆ.
ಕರೆಣ್ಣವರ್ ಅವರು ಕಾರ್ಯಕರ್ತನಿಗೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದಾಗ ಇಬ್ಬರ ನಡುವೆ ನೂಕಾಟ ನಡೆದಿದೆಯೇ ಹೊರತು, ತಮ್ಮ ಪುತ್ರನ ಯಾವ ಪಾತ್ರವೂ ಇದರಲ್ಲಿ ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಘಟನೆಯ ಕುರಿತು ತನಿಖೆ ನಡೆಯಲಿ. ರಾಜಕೀಯ ವಿರೋಧಿಗಳ ಕುಮ್ಮಕ್ಕಿನಿಂದ ಇಂತಹ ಆರೋಪ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ
ಲಕ್ಷ್ಮಣ ಸವದಿ ಪುತ್ರದಿಂದ ಡಿಸಿಸಿ ಬ್ಯಾಂಕ್ ಯೂನಿಯನ್ ಅಧ್ಯಕ್ಷನ ಮೇಲೆ ಹಲ್ಲೆ ?

