Saturday, September 13, 2025

ದೆಹಲಿ ಸರ್ಕಾರದ ಹೊಸ ಮದ್ಯ ನೀತಿ: ಬಿಯರ್‌ ಕುಡಿಯುವ ವಯಸ್ಸು 21ಕ್ಕೆ ಇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯ ಆದಾಯ ನಷ್ಟವನ್ನು ತಡೆಯಲು ರಾಜ್ಯ ಸರ್ಕಾರ ಹೊಸ ಮದ್ಯ ನೀತಿಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. ಈ ಹೊಸ ನೀತಿಯ ಪ್ರಕಾರ, ಬಿಯರ್‌ ಕುಡಿಯುವ ಕಾನೂನುಬದ್ಧ ವಯಸ್ಸನ್ನು ಪ್ರಸ್ತುತ 25 ವರ್ಷದಿಂದ 21 ವರ್ಷಕ್ಕೆ ಇಳಿಸಲು ಯೋಜನೆ ಮಾಡಲಾಗಿದೆ.

ಮೂಲಗಳ ಪ್ರಕಾರ, ಇತ್ತೀಚೆಗೆ ಸಂಬಂಧಪಟ್ಟ ಅಧಿಕಾರಿಗಳ ಸಭೆಯಲ್ಲಿ ಈ ವಿಷಯದ ಕುರಿತು ಚರ್ಚೆ ನಡೆದಿದ್ದು, ದೆಹಲಿಯ ಸುತ್ತಮುತ್ತಲಿನ ನೋಯ್ಡಾ, ಗುರುಗ್ರಾಮ್, ಗಾಜಿಯಾಬಾದ್ ಮತ್ತು ಫರಿದಾಬಾದ್‌ ಪ್ರದೇಶಗಳಲ್ಲಿ ಈಗಾಗಲೇ ಬಿಯರ್‌ ಕುಡಿಯುವ ವಯಸ್ಸು 21 ವರ್ಷಕ್ಕೆ ಇಳಿಸಲಾಗಿದೆ. ದೆಹಲಿಯಲ್ಲಿಯೂ ಈ ವಯೋಮಿತಿ ಕಡಿಮೆ ಮಾಡಿದರೆ ಅಕ್ರಮ ಮದ್ಯ ಮಾರಾಟ ಹಾಗೂ ಬ್ಲ್ಯಾಕ್ ಮಾರ್ಕೆಟ್ ನಿಯಂತ್ರಣಕ್ಕೆ ಸಹಾಯವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಭೆಯಲ್ಲಿ ಮದ್ಯದ ಅಂಗಡಿಗಳನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸುವ ಯೋಜನೆಯು ಕೂಡ ಚರ್ಚೆಗೆ ಬಂದಿದೆ. ಇದರಲ್ಲಿ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮದ್ಯ ಮಾರಾಟ ನಡೆಯಲಿದೆ. ಪ್ರಸ್ತುತ ದೆಹಲಿಯಲ್ಲಿ ಕೇವಲ ನಾಲ್ಕು ಸರ್ಕಾರಿ ನಿಗಮಗಳು ಮದ್ಯದ ಅಂಗಡಿಗಳನ್ನು ನಿರ್ವಹಿಸುತ್ತಿರುವುದರಿಂದ, ಖಾಸಗಿ ಅಂಗಡಿಗಳೂ ಸೇರ್ಪಡೆಗೊಳ್ಳುವ ಮೂಲಕ ಮಾರಾಟ ವ್ಯವಸ್ಥೆ ಸುಧಾರಿಸಬಹುದು.

ಹೊಸ ನೀತಿಯಲ್ಲಿ ನಿರೀಕ್ಷಿತ ಬದಲಾವಣೆಗಳಲ್ಲಿ, ನೆರೆದ ರಾಜ್ಯಗಳ ಮದ್ಯ ಬೆಲೆ ವ್ಯತ್ಯಾಸದಿಂದ ದೆಹಲಿಗೆ ಆದಾಯ ನಷ್ಟ ಸಂಭವಿಸದಂತೆ ಗಮನಿಸುವುದು ಮುಖ್ಯವಾಗಿದೆ. ಜೊತೆಗೆ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರೀಮಿಯಂ ಬ್ರಾಂಡ್‌ಗಳು ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು. ಜನನಿಬಿಡ ವಸತಿ ಪ್ರದೇಶಗಳಲ್ಲಿ ಮದ್ಯದ ಅಂಗಡಿಗಳ ಸಂಖ್ಯೆಯನ್ನು ಕಡಿಮೆ ಮಾಡುವುದರ ಮೂಲಕ ಸಾರ್ವಜನಿಕ ಆರೋಗ್ಯ ಹಾಗೂ ಭದ್ರತೆಯನ್ನು ಕಾಯ್ದುಕೊಳ್ಳಲಾಗುವುದು.

ಇದನ್ನೂ ಓದಿ