Monday, December 22, 2025

GST ಪ್ರಯೋಜನ ರಾಜ್ಯದ ಜನತೆಗೆ ತಲುಪಿಸಿ: ರಾಜ್ಯ ಸರಕಾರಕ್ಕೆ ಲಹರ್ ಸಿಂಗ್ ಆಗ್ರಹ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರ್ಕಾರ ಆರಂಭಿಸಿರುವ ಜಿಎಸ್​​ಟಿ (GST) ಸುಧಾರಣೆಯ ಸಂಪೂರ್ಣ ಪ್ರಯೋಜನ ರಾಜ್ಯದ ಜನತೆಗೆ ತಲುಪಿಸುವಂತೆ ಕರ್ನಾಟಕ ಸರ್ಕಾರಕ್ಕೆ ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆ ಮಾಡಿದ್ದಾಗ ರಾಜ್ಯದಲ್ಲಿ ಹೆಚ್ಚುವರಿ ಸುಂಕ ವಿಧಿಸಿ ಜನರಿಗೆ ಅದರ ಪ್ರಯೋಜನ ದೊರೆಯದಂತೆ ಮಾಡಲಾಗಿತ್ತು. ಇದೀಗ ಜಿಎಸ್​ಟಿ ವಿಚಾರದಲ್ಲಿ ಹಾಗೆ ಮಾಡಬಾರದು ಎಂದು ಅವರು ಹೇಳಿದ್ದಾರೆ.

ಜಿಎಸ್​ಟಿ ಸುಧಾರಣೆಗಳು ರಾಜ್ಯಕ್ಕೆ ಆದಾಯ ನಷ್ಟ ಉಂಟುಮಾಡುತ್ತವೆ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರವು ಈಗಾಗಲೇ ಹೆಚ್ಚುವರಿ ತೆರಿಗೆಗಳಿಗೆ ವಾದ ಮಂಡಿಸುತ್ತಿರುವಂತೆ ತೋರುತ್ತಿದೆ. ಪ್ರತಿಯೊಬ್ಬ ನಾಗರಿಕ ಮತ್ತು ಗ್ರಾಹಕರಿಗೆ ಪ್ರಯೋಜನ ದೊರೆಯುವಂತೆ ಮಾಡುವ ಉದ್ದೇಶದಿಂದ ಜಾರಿಗೆ ತರಲಾದ ಜಿಎಸ್​​ಟಿ ಸುಧಾರಣೆಗಳನ್ನು ಯಾವುದೇ ರೀತಿಯಲ್ಲಿ ದುರ್ಬಲಗೊಳಿಸಬಾರದು ಎಂದು ಅವರು ಹೇಳಿದ್ದಾರೆ.

ರಾಜ್ಯ ಸರ್ಕಾರ, ಉಚಿತ ಗ್ಯಾರಂಟಿ ಯೋಜನೆಗಳ ಹೊರೆ ರಾಜ್ಯದ ಆರ್ಥಿಕತೆಯನ್ನು ಹೇಗೆ ಕುಗ್ಗಿಸಿದೆ ಎಂಬುದರ ಬಗ್ಗೆ ಮಾತನಾಡುವುದಿಲ್ಲ. ಈಗ ಜಿಎಸ್‌ಟಿ ಸುಧಾರಣೆಯಾಗಿದೆ. ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಸುಧಾರಿಸುವ ಬಗ್ಗೆಯೂ ಪರಿಗಣಿಸಬೇಕು. ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಒಂದು ಕೈಯಿಂದ ಉದಾರವಾಗಿ ಕೊಡುತ್ತಿರುವಂತೆ ನಟಿಸುತ್ತಾ ಇನ್ನೊಂದು ಕೈಯಿಂದ ದರೋಡೆ ಮಾಡುವುದನ್ನು ನಿಲ್ಲಿಸಬೇಕು. ಆ ಮೂಲಕ ಜನರನ್ನು ಮೂರ್ಖರನ್ನಾಗಿ ಮಾಡುವುದನ್ನು ನಿಲ್ಲಿಸಬೇಕು ಎಂದು ಲಹರ್ ಸಿಂಗ್ ಆಗ್ರಹಿಸಿದ್ದಾರೆ.

ಜನರಿಗೆ ನೆರವಾಗುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರವು ಜಿಎಸ್‌ಟಿ ದರಗಳಲ್ಲಿ ಮಹತ್ವದ ಪರಿಷ್ಕರಣೆ ಘೋಷಿಸಿ ಬುಧವಾರ ಘೋಷಣೆ ಮಾಡಿತ್ತು. ಅದರಂತೆ, ಶೇ 12 ಮತ್ತು 28ರ ಸ್ಲ್ಯಾಬ್‌ಗಳನ್ನು ರದ್ದುಗೊಳಿಸಿ, ಶೇ 5 ಮತ್ತು 18ರ ಸ್ಲ್ಯಾಬ್‌ಗಳನ್ನು ಉಳಿಸಿಕೊಳ್ಳಲಾಗಿದ್ದು, ಇದರು ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿದೆ. ಆಹಾರ ವಸ್ತುಗಳು,ಕಲಿಕಾ ಸಾಮಗ್ರಿಗಳು ಹಾಗೂ ವೈಯಕ್ತಿಕ, ಆರೋಗ್ಯ ವಿಮೆಗೆ ಜಿಎಸ್​ಟಿ ವಿನಾಯಿತಿ ನೀಡಲಾಗಿದೆ.

error: Content is protected !!