ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರಕಾರ ಜಾರಿಗೆ ತಂದಿರುವ ವಾರ್ಷಿಕ ಫಾಸ್ಟ್‌ಟ್ಯಾಗ್ ಪಾಸ್‌ಗೆ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI) ತಮಿಳುನಾಡಿನಲ್ಲಿ 1.5 ಲಕ್ಷ ಮತ್ತು ಕರ್ನಾಟಕದಲ್ಲಿ ಸುಮಾರು ಒಂದು ಲಕ್ಷ ಸೇರಿದಂತೆ ಒಟ್ಟು ಐದು ಲಕ್ಷಕ್ಕೂ ಹೆಚ್ಚು ಪಾಸ್ ವಾರ್ಷಿಕ ಪಾಸ್ ಗಳನ್ನು ಮಾರಾಟ ಮಾಡಿದೆ. ಸುಮಾರು ಒಂದು ಲಕ್ಷ ಪಾಸ್ ಖರೀದಿದಾರರೊಂದಿಗೆ, ಹರಿಯಾಣ ಪ್ರಸ್ತುತ ಮೂರನೇ ಅತಿ ಹೆಚ್ಚು ವಾರ್ಷಿಕ ಪಾಸ್ ಹೊಂದಿರುವ ರಾಜ್ಯವಾಗಿದೆ.
ಪ್ರಯಾಣಿಕರಿಗೆ ಅನುಕೂಲಕರ ಮತ್ತು ಪರಿಣಾಮಕಾರಿ ಟೋಲಿಂಗ್ ಅನುಭವ ಒದಗಿಸುವ ಸಲುವಾಗಿ ಹೊಸದಾಗಿ ಪರಿಚಯಿಸಲಾದ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಸೌಲಭ್ಯವು ದೇಶಾದ್ಯಂತ ಐದು ಲಕ್ಷ ಬಳಕೆದಾರರ ಹೆಗ್ಗುರುತನ್ನು ದಾಟಿದೆ. ಕಳೆದ ನಾಲ್ಕು ದಿನಗಳಲ್ಲಿ ತಮಿಳುನಾಡು ಅತಿ ಹೆಚ್ಚು ವಾರ್ಷಿಕ ಪಾಸ್‌ಗಳನ್ನು ಖರೀದಿಸಿದೆ, ನಂತರ ಕರ್ನಾಟಕ ಮತ್ತು ಹರಿಯಾಣ ರಾಜ್ಯಗಳು ಹೆಚ್ಚು ಪಾಸ್ ಖರೀದಿಸಿವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾರ್ಷಿಕ ಪಾಸ್ ವ್ಯವಸ್ಥೆಯನ್ನು ಪರಿಚಯಿಸಿರುವುದರಿಂದ ರಾಜಮಾರ್ಗ್ ಯಾತ್ರಾ ಮೊಬೈಲ್ ಅಪ್ಲಿಕೇಶನ್ ಬಳಕೆದಾರರ ಸಂಖ್ಯೆಯೂ ಹೆಚ್ಚಾಗಿದೆ. ಈ ಅಪ್ಲಿಕೇಶನ್ ಮೂಲಕ ಪಾಸ್ ಖರೀದಿಸಬಹುದು.ಇದು ಗೂಗಲ್‌ನ ಪ್ಲೇಸ್ಟೋರ್ ಶ್ರೇಯಾಂಕದಲ್ಲಿ ಒಟ್ಟಾರೆಯಾಗಿ 23ನೇ ಸ್ಥಾನವನ್ನು ತಲುಪಿದೆ ಮತ್ತು 15 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳೊಂದಿಗೆ ಪ್ರಯಾಣ ವಿಭಾಗದಲ್ಲಿ 2 ನೇ ಸ್ಥಾನವನ್ನು ತಲುಪಿದೆ.