ಹೊಸ ದಿಗಂತ ಡಿಜಿಟಲ್ ಡೆಸ್ಕ್;
ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ವಿಮಾನಗಳ ಸುರಕ್ಷತೆಯ ವಿಚಾರದಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ನಡೆಸಿದ ಪರಿಶೋಧನೆಯಲ್ಲಿ 100 ಲೋಪಗಳು ಕಂಡುಬಂದಿವೆ.
ಪೈಲಟ್ ಸಿಬ್ಬಂದಿ ತರಬೇತಿ, ಸಿಮುಲೇಟರ್ ಅನುಮೋದನೆ ಇಲ್ಲದ ಸಿಮುಲೇಟರ್ಗಳ ಬಳಕೆ, ರೋಸ್ಟರ್ ಸಿಸ್ಟಮ್, ಏರ್‌ಫೀಲ್ಡ್ ಸೇರಿದಂತೆ ಸುಮಾರು 100 ವಿವಿಧ ನಿಯಮಗಳ ಉಲ್ಲಂಘನೆಗಳನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯವು ಗಮನಿಸಿದೆ.
ಜೂನ್ 12 ರಂದು ಅಹಮದಾಬಾದ್ನಲ್ಲಿ ವಿಮಾನ ದುರಂತ ಸಂಭವಿಸಿದೆ ಬಳಿಕ, ವಿಮಾನಯಾನ ಸಂಸ್ಥೆಗಳ ಗುಣಮಟ್ಟವನ್ನು ತೀವ್ರ ಪರಿಶೀಲನೆಗೆ ಒಳಪಡಿಸಿತು. ಈ ವೇಳೆ ಏರ್ ಇಂಡಿಯಾ ಸಂಸ್ಥೆಯಲ್ಲಿ ಅಧಿಕ ಲೋಪಗಳು ಕಂಡುಬಂದಿವೆ ಎಂದು ಡಿಜಿಸಿಎ ತಿಳಿಸಿದೆ.
ಏರ್ ಇಂಡಿಯಾವು ತಕ್ಷಣಕ್ಕೆ ಸರಿಪಡಿಸಿಕೊಳ್ಳಬೇಕಾದ 7 ಲೆವೆಲ್-1 ಲೋಪಗಳಿವೆ. ಪೈಲಟ್, ಸಿಬ್ಬಂದಿಗಳ ತರಬೇತಿ, ವಿಶ್ರಾಂತಿ, ಕರ್ತವ್ಯ ಅವಧಿಯ ನಿಯಮಗಳು, ಹೆಚ್ಚಿನ ಸಿಬ್ಬಂದಿ ಪೂರಕತೆ ಮತ್ತು ವಾಯುನೆಲೆಯ ಅರ್ಹತೆಗೆ ಸಂಬಂಧಿಸಿದ ಒಟ್ಟು 100 ಲೋಪಗಳಿವೆ ಎಂದು ಡಿಜಿಸಿಎ ಮೂಲಗಳು ತಿಳಿಸಿವೆ.
ಗುರುಗ್ರಾಮ್‌ನಲ್ಲಿರುವ ಏರ್ ಇಂಡಿಯಾದ ಮುಖ್ಯ ನೆಲೆಯಲ್ಲಿ ಜುಲೈ 1 ರಿಂದ ಜುಲೈ 4ರ ವರೆಗೆ ಈ ಪರಿಶೋಧನೆ ನಡೆಸಲಾಗಿದೆ. ವಿಮಾನ ಹಾರಾಟದ ವೇಳಾಪಟ್ಟಿ, ರೋಸ್ಟರಿಂಗ್ ಮತ್ತು ಇತರೆ ವಿವಿಧ ಕ್ಷೇತ್ರಗಳ ವಿವರವಾದ ಲೆಕ್ಕಪರಿಶೋಧನೆಯನ್ನು ನಡೆಸಲಾಯಿತು ಎಂದು ಡಿಜಿಸಿಎ ತಿಳಿಸಿದೆ.
ಜುಲೈ 23 ರಂದು ವಿವಿಧ ನಿಯಮಗಳ ಉಲ್ಲಂಘನೆ ಆರೋಪದಡಿ ಏರ್ ಇಂಡಿಯಾ ಸಂಸ್ಥೆಗೆ ಡಿಜಿಸಿಎ ನಾಲ್ಕು ಶೋಕಾಸ್ ನೋಟಿಸ್‌ಗಳನ್ನು ನೀಡಿದೆ.