ಹೊಸದಿಗಂತ ಡಿಜಿಟಲ್ ಡೆಸ್ಕ್:
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿ ಸಮಾಧಿ ಅಗೆಯುವ ಪ್ರಕ್ರಿಯೆ ಚುರುಕಾಗಿದೆ.
ಆರನೇ ಪಾಯಿಂಟ್‌ನಲ್ಲಿ ಎಸ್ಐಟಿ ತಂಡ ಕಾನೂನು ಪ್ರಕ್ರಿಯೆಗಳನ್ನು ಹಂತ ಹಂತವಾಗಿ ಮುಂದುವರಿಸುತ್ತಿದ್ದಾರೆ. ಎಸ್ಐಟಿ ಅಧಿಕಾರಿಗಳು ಯಾವುದೇ ಸಾಕ್ಷ್ಯ ನಾಶವಾಗದಂತೆ ಕಟ್ಟೆಚ್ಚರ ಭದ್ರತೆ ಕೈಗೊಂಡಿದ್ದಾರೆ. ಸಮಾಧಿಯೊಳಗೆ ನೀರು ತುಂಬುವ ಸಾಧ್ಯತೆ ಇರುವ ಕಾರಣದಿಂದ ಸಾಕ್ಷ್ಯಗಳು ಹಾನಿಯಾಗುವ ಆತಂಕ ಇದೆ. ಈ ಹಿನ್ನೆಲೆಯಲ್ಲಿ, ಸಮಾಧಿಯ ಮೇಲ್ಭಾಗ ಹಾಗೂ ನಾಲ್ಕು ದಿಕ್ಕುಗಳಲ್ಲಿ ಶೀಟ್‌ಗಳನ್ನು ಅಳವಡಿಸಿ ಪ್ರಾಥಮಿಕ ಸಂರಕ್ಷಣಾ ಕ್ರಮ ಕೈಗೊಳ್ಳಲಾಗಿದೆ. ಸ್ಥಳದಲ್ಲಿರುವ ಗುಂಡಿಯ ಸುತ್ತಲೂ ನಾಲ್ಕು ತಡೆಗೋಡೆಗಳಂತೆ ಶೀಟ್ ಹಾಕಿ ಸುರಕ್ಷತೆ ಒದಗಿಸಲಾಗಿದೆ.
ಪ್ರತೀ ಹಂತವನ್ನು ಎಸ್ಐಟಿ ತಂಡ ದೃಶ್ಯ ಹಾಗೂ ಛಾಯಾಚಿತ್ರದ ಮೂಲಕ ದಾಖಲಿಸಿದ್ದು, ಸ್ಥಳದ ವಿವರ, ಎಷ್ಟು ಎಲುಬುಗಳು ಪತ್ತೆಯಾದವು, ಅವು ಹೇಗೆ ಲಭಿಸಿವೆ ಎಂಬ ಮಾಹಿತಿ ದಾಖಲಾತಿಯಲ್ಲಿ ಸೇರಿಸಲಾಗಿದೆ. ಪತ್ತೆಯಾದ ಎಲ್ಲ ಅವಶೇಷಗಳನ್ನು ಮುಂದಿನ ವಿಧಾನ ವಿಜ್ಞಾನ (FSL) ಪರಿಶೀಲನೆಗಾಗಿ ಎಫ್ಎಸ್ಎಲ್ ತಂಡ ಸಂಗ್ರಹಿಸಿ ಕೊಂಡೊಯ್ಯುತ್ತಿದೆ.