Friday, December 12, 2025

‘ಕೈ’ ಪಾಳಯದಲ್ಲಿ ಜೋರಾದ ‘ಡಿನ್ನರ್ ಪಾಲಿಟಿಕ್ಸ್‌’: ಸಿದ್ದು ರಿಯಾಕ್ಷನ್‌ಗೆ ಡಿಕೆಶಿ ಕೌಂಟರ್ ಅಟ್ಯಾಕ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಕಾಂಗ್ರೆಸ್‌ನಲ್ಲಿ ‘ಡಿನ್ನರ್ ಪಾಲಿಟಿಕ್ಸ್’ ತೀವ್ರಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ನಾಯಕರೊಂದಿಗೆ ಸಭೆ ನಡೆಸಿದ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಆಪ್ತ ಶಾಸಕರು ಮತ್ತು ಸಚಿವರ ದೊಡ್ಡ ಬಣದೊಂದಿಗೆ ಪ್ರತ್ಯೇಕ ಸಭೆ ನಡೆಸುವ ಮೂಲಕ ರಾಜಕೀಯ ಚಟುವಟಿಕೆಗಳಿಗೆ ಮತ್ತಷ್ಟು ಕಿಚ್ಚು ಹಚ್ಚಿದ್ದಾರೆ.

ಬುಧವಾರ ರಾತ್ರಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ್ದರು. ಇದರ ಬೆನ್ನಲ್ಲೇ, ಗುರುವಾರ ರಾತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಆಪ್ತ ಗಣಿ ಉದ್ಯಮಿ ದೊಡ್ಡಣ್ಣವರ್ ಅವರ ಫಾರ್ಮ್‌ಹೌಸ್‌ನಲ್ಲಿ ಭೋಜನಕೂಟ ಏರ್ಪಡಿಸಿದ್ದರು. ಡಿಕೆಶಿ ಅವರ ಸಹೋದರ ಮತ್ತು ಸಂಸದರಾದ ಡಿ.ಕೆ. ಸುರೇಶ್ ಅವರು ಈ ಡಿನ್ನರ್ ವ್ಯವಸ್ಥೆಯ ಉಸ್ತುವಾರಿ ವಹಿಸಿದ್ದರು.

ಈ ಮಹತ್ವದ ಸಭೆಯಲ್ಲಿ ಐದಕ್ಕೂ ಹೆಚ್ಚು ಸಚಿವರು ಹಾಗೂ 40ಕ್ಕೂ ಹೆಚ್ಚು ಶಾಸಕರು ಸೇರಿದಂತೆ ಡಿಕೆಶಿ ಅವರ ಆಪ್ತ ವಲಯದ ಪ್ರಮುಖರು ಭಾಗವಹಿಸಿದ್ದರು. ಆದರೆ, ಗಮನಿಸಬೇಕಾದ ಅಂಶವೆಂದರೆ, ಸಿಎಂ ಸಿದ್ದರಾಮಯ್ಯ ಅವರ ಬಣದ ನಾಯಕರಿಗೆ ಈ ಭೋಜನಕೂಟಕ್ಕೆ ಆಹ್ವಾನ ಇರಲಿಲ್ಲ. ಈ ಸಭೆಯಲ್ಲಿ ಪಾಲ್ಗೊಂಡ ಪ್ರಮುಖರಲ್ಲಿ ಎಂ.ಸಿ ಸುಧಾಕರ್, ಮಂಕಾಳ ವೈದ್ಯ, ಕೆ.ಎಚ್. ಮುನಿಯಪ್ಪ, ಶರಣಪ್ರಕಾಶ್ ಪಾಟೀಲ್, ಎಂಎಲ್‌ಸಿ ಚೆನ್ನರಾಜ್ ಹಟ್ಟಿಹೊಳಿ, ಶಾಸಕರಾದ ಬಾಬಾಸಾಹೇಬ್ ಪಾಟೀಲ್, ಶಿವರಾಂ ಹೆಬ್ಬಾರ್, ಸಿ.ಪಿ ಯೋಗೇಶ್ವರ್, ಶ್ರೀನಿವಾಸ್ ಮಾನೆ, ಎನ್‌ಎ ಹ್ಯಾರೀಸ್, ಇಕ್ಬಾಲ್ ಹುಸೇನ್, ಗಣೇಶ್ ಹುಕ್ಕೇರಿ, ಎಸ್ ಟಿ ಸೋಮಶೇಖರ್, ಎಂಎಲ್‌ಸಿ ರವಿ ಸೇರಿದಂತೆ 40ಕ್ಕೂ ಹೆಚ್ಚು ಸಚಿವರು ಮತ್ತು ಶಾಸಕರು ಸೇರಿದ್ದಾರೆ.

ಡಿಕೆಶಿ ಅವರ ಈ ನಡೆ ಕಾಂಗ್ರೆಸ್‌ನಲ್ಲಿನ ಆಂತರಿಕ ಸಮೀಕರಣಗಳು ಮತ್ತು ಬಣ ರಾಜಕೀಯದ ಸದ್ದು ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ.

error: Content is protected !!