ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅನ್ನಭಾಗ್ಯ ಯೋಜನೆಯಲ್ಲಿ ಹೆಚ್ಚುವರಿಯಾಗಿ ನೀಡಲಾಗುತ್ತಿರುವ ಅಕ್ಕಿ ದುರ್ಬಳಕೆ ಮಾಡುವುದನ್ನು ತಪ್ಪಿಸಲು, ಎಣ್ಣೆ, ಬೇಳೆ, ಸಕ್ಕರೆ, ಉಪ್ಪು ಸೇರಿದಂತೆ ಐದಾರು ಪದಾರ್ಥಗಳಿರುವ ಇಂದಿರಾ ಕಿಟ್ ವಿತರಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಗುರುವಾರ ನಡೆದ ವಿಶ್ವ ಆಹಾರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನ್ನ ಭಾಗ್ಯ ಯೋಜನೆಯಡಿ 5 ಕೆ.ಜಿ ಅಕ್ಕಿಯನ್ನು 10 ಕೆ.ಜಿಗೆ ಏರಿಸುವುದಾಗಿ ಭರವಸೆ ನೀಡಿದೆವು. ನಂತರ ಇದರ ದುರ್ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಸಚಿವ ಸಂಪುಟದಲ್ಲಿ ಹೊಸ ತೀರ್ಮಾನಕ್ಕೆ ಬಂದಿದ್ದೇವೆ.
ನಾವು ಯಾರ ಒತ್ತಡಕ್ಕೂ ಒಳಗಾಗಿ ಈ ತೀರ್ಮಾನ ಮಾಡಿಲ್ಲ. ಈ ವಿಚಾರವಾಗಿ ಸಮೀಕ್ಷೆ ನಡೆಸಿ, ಜನಸಾಮಾನ್ಯರು ಹಾಗೂ ಶಾಸಕರ ಜೊತೆ ಚರ್ಚಿಸಿ ತೀರ್ಮಾನ ಮಾಡಿದ್ದೇವೆ. ಸಾಮಾನ್ಯವಾಗಿ ಪ್ರತಿ ಕುಟುಂಬದಲ್ಲಿ ತಿಂಗಳಿಗೆ ವ್ಯಕ್ತಿಗೆ 5-6 ಕೆ.ಜಿಗೆ ಅಕ್ಕಿ ಮಾತ್ರ ಬಳಸುತ್ತಾರೆ. ಹೀಗಾಗಿ ನಾವು ಕೊಟ್ಟ ಮಾತನ್ನೂ ಉಳಿಸಿಕೊಳ್ಳುವುದಕ್ಕೆ ಇಂದಿರಾ ಕಿಟ್ ವಿತರಿಸಲು ಮಾರ್ಗದರ್ಶನ ನೀಡಲಾಗಿದೆ. ನಮ್ಮ ಸರ್ಕಾರ ಸಿದ್ದರಾಮಯ್ಯ ಅವರ ನೇತೃತ್ವ ಹಾಗೂ ಸಚಿವ ಮುನಿಯಪ್ಪ ಅವರ ಮುಖಂಡತ್ವದಲ್ಲಿ ಈ ಐತಿಹಾಸಿಕ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.