ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ತಡರಾತ್ರಿ ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ಡಿಜೆ (DJ) ಸಂಗೀತವನ್ನು ನಿಲ್ಲಿಸಲು ಪೊಲೀಸರು ಮುಂದಾದ ಪರಿಣಾಮ ಗಾಂಧಿ ಸರ್ಕಲ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತು. ರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಘಟನೆಯು ಸಂಭವಿಸಿದ್ದು, ಯುವಕರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಛಲುವಾದಿ ಓಣಿಯ ಯುವಕ ಮಂಡಳಿ ಗಣೇಶ ಮೂರ್ತಿಯನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಗಾಂಧಿ ಸರ್ಕಲ್‌ವರೆಗೆ ಆಗಮಿಸಿತ್ತು. ಸಮಯ ರಾತ್ರಿ ೨ ಗಂಟೆಯಾಗಿದ್ದರಿಂದ ಪೊಲೀಸರು ಡಿಜೆ ನಿಲ್ಲಿಸಿ ವಿಸರ್ಜನೆ ಮುಂದುವರಿಸಬೇಕೆಂದು ಸೂಚಿಸಿದರು. ಆದರೆ ಯುವಕರು ಒಪ್ಪದೆ ಡಿಜೆ ಹಾಕಿ ನೃತ್ಯ ಮಾಡುವುದಕ್ಕೆ ಮುಂದಾದರು. ಪೊಲೀಸರು ಬಲವಂತವಾಗಿ ಡಿಜೆ ಬಂದ್ ಮಾಡಿದ ನಂತರ ಅಸಮಾಧಾನಗೊಂಡ ಯುವಕರು ಪ್ರತಿಭಟನೆ ಆರಂಭಿಸಿದರು.
‘ದಲಿತರ ಗಣೇಶ ಹಬ್ಬಕ್ಕೆ ಪೊಲೀಸರ ವಿರೋಧ’ ಎಂದು ಘೋಷಣೆ ಕೂಗುತ್ತಾ ಯುವಕರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಅಧಿಕಾರಿಗಳು ಮನವೊಲಿಸಲು ಯತ್ನಿಸಿದರೂ ಪರಿಸ್ಥಿತಿ ಹತೋಟಿಗೆ ಬಾರದ ಕಾರಣ ಲಘು ಲಾಠಿ ಪ್ರಹಾರ ನಡೆಸಿ ಪ್ರತಿಭಟನೆಯನ್ನು ಚದುರಿಸಲಾಯಿತು.
ಇದಾದ ಬಳಿಕ ಮತ್ತೊಮ್ಮೆ ದಲಿತ ಯುವಕ ಸಂಘದವರು ಡಿಜೆ ಬಂದ್ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು, ಡಿಜೆ ಹಾಕದಿದ್ದರೆ ವಿಸರ್ಜನೆ ಮಾಡುವುದಿಲ್ಲವೆಂದು ಎಚ್ಚರಿಕೆ ನೀಡಿದರು. ಬಳಿಕ ಅಧಿಕಾರಿಗಳು ಯುವಕರ ಮನವೊಲಿಸಿ, ಡಿಜೆ ಬಂದ್ ಮಾಡುವ ನಿರ್ಧಾರ ಕೈಗೊಂಡು ಮೆರವಣಿಗೆಯನ್ನು ವಿಸರ್ಜನೆಗೆ ಕಳುಹಿಸಿದರು.
ಈ ಘಟನೆಯ ಸಮಯದಲ್ಲಿ ಸ್ಥಳದಲ್ಲೇ ಎಸ್ಪಿ, ಡಿವೈಎಸ್ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದು ಪರಿಸ್ಥಿತಿ ಹತೋಟಿಗೆ ತರಲಾಯಿತು. ಸಾರ್ವಜನಿಕರ ಸುರಕ್ಷತೆ ಹಾಗೂ ಶಾಂತಿ ಕಾಪಾಡುವ ದೃಷ್ಟಿಯಿಂದ ಪೊಲೀಸರು ಎಚ್ಚರಿಕೆಯಿಂದ ನಡೆದುಕೊಂಡರು.