ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಹೆಸರು ಶಾಶ್ವತವಾಗಿ ಉಳಿಯುವಂತೆ ಬೆಂಗಳೂರಿನ ಪ್ರಮುಖ ಸ್ಥಳಕ್ಕೆ ಅವರ ಹೆಸರನ್ನು ಇಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.
ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಹೆಗಡೆ ಅವರ 99ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಹೆಗಡೆ ಅವರ ಆಡಳಿತ, ರಾಜಕೀಯ ಶೈಲಿ ಮತ್ತು ಕೊಡುಗೆಗಳ ಬಗ್ಗೆ ನೆನೆದರು.
ರಾಮಕೃಷ್ಣ ಹೆಗಡೆ ಅವರದ್ದು ಶುದ್ಧ ರಾಜಕಾರಣ ಮತ್ತು ಪರಿಶುದ್ಧ ಆಡಳಿತವಾಗಿತ್ತು ಎಂದು ಡಿಕೆಶಿ ಪ್ರಶಂಸಿಸಿದರು. ಹೆಗಡೆ ಅವರಲ್ಲಿ ಕ್ಷಮಿಸುವ ಗುಣ ಹಾಗೂ ಹೃದಯ ಶ್ರೀಮಂತಿಕೆ ಇತ್ತು, ದ್ವೇಷ ರಾಜಕಾರಣ ಎಂದಿಗೂ ಅವರ ಭಾಗವಾಗಿರಲಿಲ್ಲ. ತಮ್ಮ ರಾಜಕೀಯ ಜೀವನದ ಆರಂಭಿಕ ಹಂತಗಳಲ್ಲಿ ಹೆಗಡೆ ವಿರುದ್ಧ ಹೋರಾಟ ಮಾಡಿದ್ದ ನೆನಪನ್ನು ಹಂಚಿಕೊಂಡ ಅವರು, 1985ರ ಚುನಾವಣೆಯಲ್ಲಿ ಹೆಗಡೆ ಅವರ ಜನಪ್ರಿಯತೆಯ ಅಲೆಯಲ್ಲಿ ಹಲವರು ಸೋತಿದ್ದರೂ, ಅವರ ಕಾರ್ಯಪದ್ಧತಿ ಮುಂದಿನ ತಲೆಮಾರಿಗೆ ದೊಡ್ಡ ಪಾಠವಾಗಿತ್ತು ಎಂದು ತಿಳಿಸಿದರು.
ಶಿವಕುಮಾರ್ ಅವರು ಹೆಗಡೆ ಅವರ ರಾಜಕೀಯದ ಕೆಲವು ಸ್ಮರಣೀಯ ಘಟನೆಗಳನ್ನೂ ಹಂಚಿಕೊಂಡರು. ಟೆಲಿಫೋನ್ ಟ್ಯಾಪಿಂಗ್ ಕುರಿತು ನಡೆದ ಚರ್ಚೆಯಲ್ಲಿ ಹೆಗಡೆ ನೀಡಿದ ಭಾಷಣ ತಮ್ಮ ಜೀವನದಲ್ಲಿ ಕೇಳಿದ ಅತ್ಯುತ್ತಮ ಭಾಷಣಗಳಲ್ಲಿ ಒಂದೆಂದು ಹೇಳಿದ್ದಾರೆ. ವೀರೇಂದ್ರ ಪಾಟೀಲರ ಜೊತೆ ಸ್ನೇಹ ಹೊಂದಿದ್ದರೂ ಪಕ್ಷದ ಸಿದ್ಧಾಂತಕ್ಕೆ ಹೆಗಡೆ ಅವರು ಕಟ್ಟುನಿಟ್ಟಾಗಿ ಬದ್ಧರಾಗಿದ್ದರು ಎಂಬುದನ್ನು ಅವರು ವಿಶೇಷವಾಗಿ ಸ್ಮರಿಸಿದರು.
ಬೆಂಗಳೂರು ಇಂದು ಜಾಗತಿಕ ನಗರವಾಗಿ ಬೆಳೆದಿರುವುದಕ್ಕೆ ಹೆಗಡೆ ಅವರು ಹಾಕಿದ್ದ ಅಡಿಪಾಯ ಪ್ರಮುಖ ಕಾರಣವೆಂದು ಡಿಕೆಶಿ ಅಭಿಪ್ರಾಯ ಪಟ್ಟರು. ಎಂಜಿನಿಯರಿಂಗ್ ಕಾಲೇಜುಗಳಿಗೆ ಅನುಮತಿ ನೀಡಿದ್ದರಿಂದ ಕೈಗಾರಿಕಾ ಮತ್ತು ತಂತ್ರಜ್ಞಾನ ಕ್ಷೇತ್ರ ಬೆಳೆಯಿತು. ಐಟಿ ಉದ್ಯಮಗಳು ಬೆಳೆಯಲು ವೇದಿಕೆ ಸಿಕ್ಕಿತು. ಅಲ್ಲದೆ, ಬೆಂಗಳೂರಿಗೆ ಕಾವೇರಿ ನೀರು ತರಲು ಹೆಗಡೆ ಕೈಗೊಂಡ ಕ್ರಮವೇ ಇಂದು ನಗರದ ನೀರಿನ ಅವಶ್ಯಕತೆಯನ್ನು ಪೂರೈಸಲು ಕಾರಣವಾಗಿದೆ ಎಂದರು.