ಭಾರತದಲ್ಲಿ ಡಿಜಿಟಲ್ ಪಾವತಿಗಳ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಸಹ ನಗದು ವ್ಯವಹಾರಗಳ ಅಗತ್ಯತೆ ಇನ್ನೂ ಬಹಳ ಮಟ್ಟಿಗೆ ಇದೆ. ದಿನದ ಆರಂಭದಲ್ಲಿ ಚಿಲ್ಲರೆ ಅಂಗಡಿಯಿಂದ ಆರಂಭವಾದ ನಗದು ಬಳಕೆ ಶಾಪಿಂಗ್ ಮಾಲ್, ಪ್ರಯಾಣದ ಟಿಕೆಟ್‌ಗಳ ಪಾವತಿ, ಹೋಟೆಲ್ ಬಿಲ್ಲುಗಳವರೆಗೆ ಮುಂದುವರಿಯುತ್ತದೆ. ಆದರೆ ಪ್ರತಿದಿನ ಕೈ ಸೇರುವ ನೋಟುಗಳು ಕೇವಲ ಕಾಗದದಿಂದ ತಯಾರಾಗಿಲ್ಲ ಎಂಬ ವಿಚಾರ ಬಹುತೇಕ ಜನರಿಗೆ ಗೊತ್ತಿಲ್ಲ. ಈ ನೋಟುಗಳು ತುಂಬಾ ವೈಜ್ಞಾನಿಕ ರೀತಿಯಲ್ಲಿ ತಯಾರಾಗುತ್ತವೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ನೀಡಿರುವ ಮಾಹಿತಿ ಪ್ರಕಾರ, ಭಾರತದಲ್ಲಿ ಬಳಸಲಾಗುವ ನೋಟುಗಳು ಸಾಮಾನ್ಯ ಮರದ ಕಾಗದದಿಂದ ಅಲ್ಲ, ಬದಲಿಗೆ 100% ಹತ್ತಿ ನಾರಿನಿಂದ ತಯಾರಾಗುತ್ತವೆ. ಹತ್ತಿ ಆಧಾರಿತ ಈ ಕಾಗದವು ಹೆಚ್ಚು ಬಾಳಿಕೆ ಬರುವುದರ ಜೊತೆಗೆ ನಕಲಿ ನೋಟು ತಯಾರಿಕೆಯನ್ನು ತಡೆಯುವಂತಹ ತಾಂತ್ರಿಕ ಭದ್ರತೆಗಳನ್ನು ಹೊಂದಿರುತ್ತದೆ. ಸಾಮಾನ್ಯ ಕಾಗದಕ್ಕಿಂತ 4–5 ಪಟ್ಟು ಹೆಚ್ಚು ಬಾಳಿಕೆಯುಳ್ಳ ಈ ನೋಟುಗಳು ಒದ್ದೆಯಾದರೂ ಹಾಳಾಗದೆ, ಮಡಚಿದರೂ ಸುಲಲಿತವಾಗಿ ಬಳಸಬಹುದು.
ಹತ್ತಿ ಕಾಗದದಲ್ಲಿ ನ್ಯಾನೋ ಪ್ರಿಂಟಿಂಗ್, ಮೈಕ್ರೋಲೆಟರಿಂಗ್, ವಾಟರ್‌ಮಾರ್ಕ್ ಮತ್ತು ಬಣ್ಣ ಬದಲಾಯಿಸುವ ಶಾಯಿಯಂತಹ ಹಲವು ಭದ್ರತಾ ಅಂಶಗಳನ್ನು ಅಳವಡಿಸಬಹುದಾಗಿದೆ. ಇದರ ಜೊತೆಗೆ ನೋಟಿನಲ್ಲಿ ಕೆಲವು ವಿಶೇಷ ಭದ್ರತಾ ಅಂಶಗಳನ್ನು ಒಳಗೊಂಡಿರುತ್ತದೆ. ನೋಟುಗಳ ಮಧ್ಯದಲ್ಲಿ ನೇಯ್ದಿರುವ ಒಂದು ತೆಳುವಾದ ದಾರ ಇರುತ್ತದೆ. ಈ ದಾರ ಬೆಳಕಿಗೆ ಹಿಡಿದಾಗ ಮಾತ್ರ ಕಾಣುತ್ತದೆ ಮತ್ತು ನೋಟನ್ನು ಓರೆ ಮಾಡಿದಾಗ ಬಣ್ಣ ಬದಲಾಗುತ್ತದೆ. ಮಹಾತ್ಮಾ ಗಾಂಧೀಜಿಯ ಭಾವಚಿತ್ರವನ್ನು ವಾಟರ್‌ಮಾರ್ಕ್ ರೂಪದಲ್ಲಿ ಮುದ್ರಿಸಲಾಗಿದ್ದು, ನೋಟು ನಿಜವೋ ಕೃತಕವೋ ಅನ್ನುವುದನ್ನು ತಕ್ಷಣವೇ ಗುರುತಿಸಲು ಸಾಧ್ಯವಾಗುತ್ತದೆ.
ಇನ್ನು ಏಕ ದೃಷ್ಟಿಯೊಂದಿಗೆ ನೋಡಿದರೆ ಮಾತ್ರ ಕಾಣುವ ಸೂಕ್ಷ್ಮ ಅಕ್ಷರಗಳು (micro lettering), ಎತ್ತರಿಸಿದ ಮುದ್ರಣದ ಮೂಲಕ ಮುದ್ರಿಸಲಾದ ಅಶೋಕ ಸ್ತಂಭ ಮತ್ತು ಗಾಂಧೀಜಿ ಭಾವಚಿತ್ರದಿಂದ ದೃಷ್ಟಿಹೀನರೂ ಸಹ ನೋಟು ಗುರುತಿಸಲು ಸಾಧ್ಯವಾಗುತ್ತದೆ. ಈ ಎಲ್ಲ ಭದ್ರತಾ ಅಂಶಗಳು ನಕಲಿ ನೋಟು ತಯಾರಿಕೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ಅಮೆರಿಕ ಸೇರಿದಂತೆ ಹಲವಾರು ದೇಶಗಳು ಹತ್ತಿ ಹಾಗೂ ಲಿನಿನ್ ಮಿಶ್ರಣದ ಮೂಲಕ ಕರೆನ್ಸಿ ನೋಟುಗಳನ್ನು ತಯಾರಿಸುತ್ತಿರುವ ಈ ಸಂದರ್ಭದಲ್ಲಿ, ಭಾರತ ಶೇ.100 ರಷ್ಟು ಹತ್ತಿ ಆಧಾರಿತ ನೋಟು ತಯಾರಿಕೆ ಮೂಲಕ ನೋಟಿನ ಬಾಳಿಕೆ ಮತ್ತು ಭದ್ರತೆಯಲ್ಲಿ ಮುನ್ನಡೆಯಿದೆ. ಹತ್ತಿ ನೋಟುಗಳು ಕೇವಲ ಪರಿಸರ ಸ್ನೇಹಿ ಮಾತ್ರವಲ್ಲ, ತಂತ್ರಜ್ಞಾನಗಳೊಂದಿಗೆ ದೇಶದ ಆರ್ಥಿಕ ಸುರಕ್ಷತೆಗೂ ಬಲ ನೀಡುತ್ತವೆ.
ಇದೇ ಕಾರಣಕ್ಕೆ, ನೋಟುಗಳನ್ನು ಕೇವಲ ಪಾವತಿಯ ಸಾಧನವೆಂದು ನೋಡದೆ, ದೇಶದ ಆರ್ಥಿಕ ಭದ್ರತೆ ಹಾಗೂ ತಂತ್ರಜ್ಞಾನದ ಸಂಕೇತವೆಂದು ಪರಿಗಣಿಸಬೇಕು. (ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. )