Monday, January 12, 2026

ಸಿಎಂ ಬದಲಾವಣೆ ಬಗ್ಗೆ ಕಾಂಗ್ರೆಸ್ ಉಸ್ತುವಾರಿ ಸಚಿವರು ಏನಂದ್ರು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ರಾಜಕೀಯದಲ್ಲಿ ಚರ್ಚೆಯಾಗುತ್ತಿರುವ “ನವೆಂಬರ್ ಕ್ರಾಂತಿ” ಕುರಿತು ಸ್ಪಷ್ಟನೆ ನೀಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಪಕ್ಷದಲ್ಲಿ ನಡೆದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ನಂತರ ಸದಾಶಿವನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಪಕ್ಷದ ಚೌಕಟ್ಟು ಮೀರಿದ ಹೇಳಿಕೆಗಳನ್ನು ಕೆಲವರು ನೀಡಿದ್ದಾರೆ. ಅದನ್ನು ಗಮನಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸೂಚನೆ ನೀಡಿದ್ದೇನೆ” ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮತಗಳ್ಳತನದ ಕುರಿತು ಮಾತನಾಡಿದ ಸುರ್ಜೇವಾಲ, “ಇದು ಕೇವಲ ಮಹದೇವಪುರ ಮತ್ತು ಆಳಂದ ಕ್ಷೇತ್ರಗಳಿಗೆ ಸೀಮಿತವಾಗಿಲ್ಲ. ರಾಜ್ಯದ ಅನೇಕ ಕ್ಷೇತ್ರಗಳಲ್ಲಿ ಮತಗಳ್ಳತನ ನಡೆದಿದೆ. ಮಹಾರಾಷ್ಟ್ರದಲ್ಲೂ ಇದೇ ಘಟನೆ ನಡೆದಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ರಾಹುಲ್ ಗಾಂಧಿ ಬಿಡುಗಡೆ ಮಾಡಿದ್ದಾರೆ. ಬಿಜೆಪಿ ಸಂವಿಧಾನಿಕ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ಕಾರಣ, ಕಾಂಗ್ರೆಸ್ ‘ವೋಟ್ ಚೋರಿ’ ಅಭಿಯಾನ ನಡೆಸುತ್ತಿದೆ” ಎಂದರು.

ರಾಜ್ಯ ಕಾಂಗ್ರೆಸ್ ವತಿಯಿಂದ ಬೆಂಗಳೂರಿನ ಪುಲಕೇಶಿ ನಗರದಲ್ಲಿ ಈ ಅಭಿಯಾನ ಆಯೋಜಿಸಲಾಗುತ್ತಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸುರ್ಜೇವಾಲ ಅವರ ನೇತೃತ್ವದಲ್ಲಿ ನಡೆಯಲಿದೆ.

ಇದಾದ ಬಳಿಕ, ಸುರ್ಜೇವಾಲ ಅವರು ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಭೇಟಿ ನೀಡಿ, ಇತ್ತೀಚೆಗೆ ಪೇಸ್‌ಮೇಕರ್ ಅಳವಡಿಸಿಕೊಂಡಿರುವ ಖರ್ಗೆಯವರ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಶಾಸಕ ಎನ್‌.ಎ. ಹ್ಯಾರಿಸ್ ಕೂಡ ಉಪಸ್ಥಿತರಿದ್ದರು.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!