ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಚಿತ್ರರಂಗದಲ್ಲಿ ಸ್ಟಾರ್ ನಟರ ಸಂಭಾವನೆ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಪ್ಯಾನ್-ಇಂಡಿಯಾ ಸಿನಿಮಾಗಳ ಯುಗದಲ್ಲಿ ನಟರ ಮಾರುಕಟ್ಟೆ ಮೌಲ್ಯ ದಿನೇ ದಿನೇ ಏರಿಕೆಯಾಗುತ್ತಿದ್ದು, ಅಗ್ರಸ್ಥಾನದ ಪೈಪೋಟಿ ತೀವ್ರವಾಗುತ್ತಿದೆ. ಇಂತಹ ಸಂದರ್ಭದಲ್ಲೇ, ದಕ್ಷಿಣ ಭಾರತದ ಒಬ್ಬ ಸೂಪರ್ ಸ್ಟಾರ್ ಇಡೀ ದೇಶದ ಚಿತ್ರರಂಗದ ಗಮನ ಸೆಳೆದಿದ್ದಾರೆ.
ಸದ್ಯಕ್ಕೆ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಭಾರೀ ಜನಪ್ರಿಯತೆ ಹೊಂದಿರುವ ನಟ ಪ್ರಭಾಸ್ ಪ್ರತಿ ಸಿನಿಮಾಗೆ 150 ರಿಂದ 200 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಅವರ ಬಳಿಕ “ಪುಷ್ಪ 2” ಚಿತ್ರದ ಅಪಾರ ಯಶಸ್ಸಿನೊಂದಿಗೆ ಅಲ್ಲು ಅರ್ಜುನ್ ಸೂಪರ್ ಸ್ಟಾರ್ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಇದೇ ವೇಳೆ, ಕನ್ನಡದ ರಾಕಿಂಗ್ ಸ್ಟಾರ್ ಯಶ್ ಕೂಡ ದೊಡ್ಡ ಮೊತ್ತದ ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ತಮಿಳಿನ ದಳಪತಿ ವಿಜಯ್ ಕೂಡ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದು, ಆದರೆ ಅವರು ಸದ್ಯ ಸಿನಿಮಾಗಿಂತ ರಾಜಕೀಯ ಚಟುವಟಿಕೆಗಳತ್ತ ಹೆಚ್ಚು ಗಮನ ಹರಿಸಿದ್ದಾರೆ.
ಈ ಎಲ್ಲ ಹೆಸರುಗಳ ನಡುವೆ, ಇಡೀ ಭಾರತೀಯ ಸಿನಿಮಾರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟ ಎಂಬ ಗೌರವ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಸೇರಿದೆ. ‘ಜೈಲರ್’ ಸಿನಿಮಾಗೆ ಆರಂಭದಲ್ಲಿ 150 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದ ರಜನಿಕಾಂತ್, ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ನಿರ್ಮಾಪಕರಿಂದ ಇನ್ನೂ 100 ಕೋಟಿ ರೂಪಾಯಿ ಹೆಚ್ಚುವರಿ ಮೊತ್ತ ಪಡೆದಿದ್ದಾರೆ ಎನ್ನಲಾಗಿದೆ. ಈ ಮೂಲಕ ಒಟ್ಟಾರೆ 250 ಕೋಟಿ ರೂಪಾಯಿ ಸಂಭಾವನೆ ಪಡೆದು, ಅವರು ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿದ್ದಾರೆ.

