ಹೊಸದಿಗಂತ ವರದಿ ಮಂಗಳೂರು:
ಕೆಎಂಸಿ ಆಸ್ಪತ್ರೆಯು ಮಂಗಳೂರಿನ ಡಾ.ಟಿ ಎಮ್‌ಎ ಪೈ ಅಂತರಾಷ್ಟ್ರೀಯ ಕನ್ವೆನ್ಶನ್ ಸೆಂಟರ್‍ನಲ್ಲಿ ಡಾ. ಸುದರ್ಶನ್ ಬಲ್ಲಾಳ್ ಉಪನ್ಯಾಸ 2025 ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿತು.
ಕಾರ್ಯಕ್ರಮದಲ್ಲಿ ಇನ್ಫೊಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ, ʼಡಾ. ಸುದರ್ಶನ್ ಬಲ್ಲಾಳ್ ಅವರಂತಹ ಉನ್ನತ ದರ್ಜೆಯ ವೃತ್ತಿಪರರನ್ನು ಅನುಕರಿಸುವುದುʼ ಎಂಬ ವಿಷಯದ ಮೇಲೆ ಒಳನೋಟಗಳನ್ನು ಹಂಚಿಕೊಂಡರು.
ಕಾರ್ಯಕ್ರಮವನ್ನು ಕೆಎಂಸಿ ಮಂಗಳೂರಿನ ನೆಫ್ರೊಲಾಜಿ ವಿಭಾಗ ಆಯೋಜಿಸಿದ್ದು ಅನೇಕ ಮುಖಂಡರು, ಆರೋಗ್ಯ ಕ್ಷೇತ್ರದ ತಜ್ಞರು, ಶೈಕ್ಷಣಿಕ ಮುಖ್ಯಸ್ಥರು, ಮಣಿಪಾಲ್ ಅಕಾಡೆಮಿ ಉನ್ನತ ಶಿಕ್ಷಣದ ಸದಸ್ಯರು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ “ವೈದ್ಯಕೀಯ ವೃತ್ತಿಪರತೆಯ ಮೇಲೆ ಡಾ. ಬಲ್ಲಾಳ್ ಅವರ ಪ್ರಭಾವ”ದ ಕುರಿತು ಚರ್ಚೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣಿಪಾಲ ಅಕಾಡೆಮಿ ಉನ್ನತ ಶಿಕ್ಷಣದ ಸಹ ಕುಲಪತಿ ಡಾ ಹೆಚ್ ಎಸ್ ಬಲ್ಲಾಳ್ ವಹಿಸಿಕೊಂಡಿದ್ದರು. ಸಂಸ್ಥೆಯ ಹಿರಿಯ ಮುಖಂಡರಾದ ಮಂಗಳೂರು ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡೀನ್ ಡಾ. ಬಿ ಉನ್ನೀಕೃಷ್ಣನ್ , ನೆಫ್ರೊಲಾಜಿ ವಿಭಾಗದ ಪ್ರೊಫೆಸರ್ ಡಾ ಸುಶಾಂತ್ ಕುಮಾರ್ , ನೆಫ್ರೊಲಾಜಿ ವಿಭಾಗದ ಮುಖ್ಯಸ್ಥರು ಡಾ ಮಯೂರ್ ವಿ ಪ್ರಭು ಮತ್ತು ನೆಪ್ರೊಲಾಜಿ ವಿಭಾಗದ ಹೆಚ್ಚುವರಿ ಫ್ರೊಫೆಸರ್ ಡಾ ಅಶೋಕ್ ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ ಸುದರ್ಶನ್ ಬಲ್ಲಾಳ್ ಈ ಉಪನ್ಯಾಸ ಸರಣಿಯು ಕಲಿಕೆ ಮತ್ತು ವಿಚಾರ ವಿನಿಮಯಕ್ಕೆ ವೇದಿಕೆಯಾಗಿ ಮುಂದುವರೆಯುತ್ತಿರುವುದು ಸಂತೋಷಕರ . ಅನೇಕ ಗೌರವಾನ್ವಿತ ವ್ಯಕ್ತಿಗಳ ಉಪಸ್ಥಿತಿಯು ವೈದ್ಯಕೀಯ ಕ್ಷೇತ್ರ ಪ್ರತಿನಿಧಿಸುವ ಸಹಾನುಭೂತಿ, ಸಮಗ್ರತೆ ಮತ್ತು ಜವಾಬ್ದಾರಿಯ ಮೌಲ್ಯವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದರು.
ಪ್ರಮುಖ ವಿಚಾರಗಳನ್ನು ಮಾತನಾಡುತ್ತಾ ಎನ್ ಆರ್ ನಾರಾಯಣಮೂರ್ತಿ ಡಾ ಬಲ್ಲಾಳ್ ಅವರ ಪಯಣ ವೃತ್ತಿಪರತೆಯ ಉತ್ಕೃಷ್ಟತೆ ಮತ್ತು ಮನುಷ್ಯ ಮೌಲ್ಯದ ಮಿಶ್ರಣ ಎಂದು ಶ್ಲಾಘಿಸಿದರು. ಅವರ ಈ ಉದಾಹರಣೆಯು ನಾಯಕತ್ವ ಎಂಬುದು ಮಾನವೀಯತೆ, ಬದ್ದತೆ ಮತ್ತು ಸೇವಾ ಮನೋಭಾವದ ಮೇಲೆ ನೆಲೆನಿಂತಿದೆ ಎಂಬುದನ್ನು ನೆನಪಿಸುತ್ತದೆ ಎಂದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಣಿಪಾಲ ಅಕಾಡೆಮಿ ಉನ್ನತ ಶಿಕ್ಷಣದ ಸಹ ಕುಲಪತಿ ಡಾ ಹೆಚ್ ಎಸ್ ಬಲ್ಲಾಳ್ “ 2025ರ ಉಪನ್ಯಾಸ ವೈದ್ಯಕೀಯ ಬ್ರಾತೃತ್ವದ ಏಳಿಗೆಗೆ ಅರ್ಥಪೂರ್ಣ ಚರ್ಚೆಗಳು ಹೇಗೆ ಮಹತ್ವ ಎಂಬುದನ್ನು ನೆನಪಿಸುತ್ತದೆ. ಈ ಕಾರ್ಯಕ್ರಮವು ವೈದ್ಯಕೀಯ ಅಭ್ಯಾಸ, ಸಂಶೋಧನೆ ಮತ್ತು ಶಿಕ್ಷಣದತ್ತ ನಮ್ಮ ವಿಧಾನವನ್ನು ರೂಪಿಸುವ ತತ್ವಗಳನ್ನು ಪುನರ್ವಿಮರ್ಶಿಸಲು ಒಂದು ಅಮೂಲ್ಯ ಸಮಯವನ್ನು ಒದಗಿಸಿದೆ” ಎಂದರು.
ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಹೆಯ ಉಪ ಕುಲಪತಿ ಲೆಫ್ಟಿನೆಂಟ್ ಜನರಲ್ ಡಾ. ಎಮ್ ಡಿ ವೆಂಕಟೇಶ್ ಉಪಸ್ಥಿತರಿದ್ದರು. ಜೊತೆಗೆ ಗೌರವ ಅತಿಥಿಗಳಾಗಿ ಮಾಹೆಯ ಹೆಲ್ತ್ ಸೈನ್ಸ್‌ನ ಸಹ ಉಪ ಕುಲಪತಿ ಡಾ . ಶರತ್ ಕೆ ರಾವ್, ಮಾಹೆ ಮಂಗಳೂರು ಕ್ಯಾಂಪಸ್‌ನ ಸಹ ಉಪ ಕುಲಪತಿ ಡಾ. ದಿಲೀಪ್ ಜಿ ನಾಯ್ಕ್ , ಎಮ್‌ಹೆಚ್‌ಇಪಿಎಲ್ ಕ್ರಿಟಿಕಲ್ ಕೇರ್ ಸರ್ವಿಸ್ ಚೇರ್ಮನ್ ಡಾ ಸುನಿಲ್ ಕಾರಂತ್ ಮತ್ತು ಮಣಿಪಾಲ್ ಅಕಾಡೆಮಿ ಉನ್ನತ ಶಿಕ್ಷಣದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ ವೇಣುಗೋಪಾಲ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

