ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದ ಕೆಆರ್ ಸರ್ಕಲ್‌ನಲ್ಲಿ ಇಂದು ಬೆಳ್ಳಂಬೆಳಗ್ಗೆ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಹಾಗೂ ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು. ಬಿಎಂಟಿಸಿ ಚಾಲಕನ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣವೆಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.
ಮೆಜೆಸ್ಟಿಕ್‌ನಿಂದ ಕಾಡುಗೋಡಿ ಕಡೆ ಸಾಗುತ್ತಿದ್ದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್, ಕೆಆರ್ ಸರ್ಕಲ್‌ನ ಬಸ್ ನಿಲ್ದಾಣದ ಸಮೀಪ ಅಚಾನಕ್ ಮುಖ್ಯ ರಸ್ತೆಗೆ ಪ್ರವೇಶಿಸಿದೆ. ಇದೇ ವೇಳೆ ನೃಪತುಂಗ ರಸ್ತೆಯ ಕಡೆಗೆ ಬರುತ್ತಿದ್ದ ನ್ಯಾಷನಲ್ ಟ್ರಾವೆಲ್ಸ್ ಖಾಸಗಿ ಬಸ್ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಡಿಕ್ಕಿಯಾಗಿದೆ. ಡಿಕ್ಕಿಯ ತೀವ್ರತೆಗೆ ಎರಡೂ ಬಸ್‌ಗಳ ಕಿಟಕಿ ಗಾಜುಗಳು ಒಡೆದು ಚೆಲ್ಲಾಪಿಲ್ಲಿಯಾಗಿವೆ.
ಇದನ್ನೂ ಓದಿ: Snacks | ಸೂಪರ್ ಟೇಸ್ಟಿ ಆಲೂ ಟಿಕ್ಕಿ ಚಾಟ್ ತಿಂದಿದ್ದೀರಾ? ಏನ್ ರುಚಿ ಗೊತ್ತಾ?
ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಅಥವಾ ಗಂಭೀರ ಗಾಯಗಳಾಗಿಲ್ಲ. ಆದರೆ ಘಟನೆ ಹಿನ್ನೆಲೆಯಲ್ಲಿ ಕೆಆರ್ ಸರ್ಕಲ್‌ನಿಂದ ನೃಪತುಂಗ ರಸ್ತೆ, ವಿಧಾನಸೌಧದ ದಿಕ್ಕಿನಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ, ಪ್ರಯಾಣಿಕರು ಪರದಾಡಿದರು.
ಮಾಹಿತಿ ಪಡೆದ ಬೆಂಗಳೂರು ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ತೆರಳಿ ಬಸ್‌ಗಳನ್ನು ತೆರವುಗೊಳಿಸಿ ಸಂಚಾರವನ್ನು ನಿಧಾನವಾಗಿ ಪುನರ್‌ಸ್ಥಾಪಿಸಿದರು. ಬಿಎಂಟಿಸಿ ಅಧಿಕಾರಿಗಳು ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದಾರೆ.

