ಹೊಸದಿಗಂತ ಡಿಜಿಟಲ್ ಡೆಸ್ಕ್:
ಆನೇಕಲ್ನಲ್ಲಿ ನಾಲ್ವರು ದುಷ್ಕರ್ಮಿಗಳು ಖಾಸಗಿ ಬಸ್ ಒಂದರ ವೈರ್ ಕಟ್ ಮಾಡಿ ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸಿದರೆ, ಮತ್ತೊಂದೆಡೆ ಅತ್ತಿಬೆಲೆಯಲ್ಲಿ ಬಸ್ನೊಳಗೆ ನುಗ್ಗಿ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ರಾತ್ರಿ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಥಳಿ ರಸ್ತೆಯಲ್ಲಿ ಸಿನಿಮೀಯ ಘಟನೆಯೊಂದು ನಡೆದಿದೆ. ಕುಡಿದ ಮತ್ತಿನಲ್ಲಿದ್ದ ನಾಲ್ವರು ದುಷ್ಕರ್ಮಿಗಳು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ಸಿನ ವೈರ್ಗಳನ್ನು ಕಟ್ ಮಾಡಿ ಬಸ್ ಕದ್ದು ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಆದರೆ, ಅತಿವೇಗ ಮತ್ತು ನಿಯಂತ್ರಣ ತಪ್ಪಿದ ಬಸ್, ಸರಣಿಯಾಗಿ ಎರಡು ವಿದ್ಯುತ್ ಕಂಬಗಳಿಗೆ ಮತ್ತು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಓರ್ವ ಪಾದಚಾರಿ ವ್ಯಕ್ತಿಗೆ ಡಿಕ್ಕಿ ಹೊಡೆದಿದೆ.
ಘಟನೆಯ ರಭಸಕ್ಕೆ ಬಸ್ಸಿನ ಮುಂಭಾಗ ಜಖಂ ಆಗಿದ್ದು, ಪಾದಚಾರಿ ವ್ಯಕ್ತಿಗೂ ಗಾಯಗಳಾಗಿವೆ. ಅದೃಷ್ಟವಶಾತ್ ರಾತ್ರಿ ವೇಳೆ ಜನಸಂಚಾರ ಕಡಿಮೆ ಇದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಕೂಡಲೇ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಬಸ್ ತಡೆದು ನಿಲ್ಲಿಸಿದ್ದು, ಈ ವೇಳೆ ಮೂವರು ಕಳ್ಳರು ಪರಾರಿಯಾಗಿದ್ದಾರೆ. ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಓರ್ವನನ್ನು ಥಳಿಸಿ, ನಂತರ ಆನೇಕಲ್ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಎಂದಿನಂತೆ ಚಾಲಕರು ರಸ್ತೆ ಬದಿಯಲ್ಲಿ ಬಸ್ ಪಾರ್ಕ್ ಮಾಡಿ ಹೋಗಿದ್ದ ವೇಳೆ ಈ ಘಟನೆ ಸಂಭವಿಸಿದೆ.

