ಹೊಸದಿಗಂತ ಡಿಜಿಟಲ್ ಡೆಸ್ಕ್:
ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಗಜಪಡೆಗೆ ಇಂದು ಮೊದಲ ಹಂತದ ಸಿಡಿಮದ್ದು ತಾಲೀಮನ್ನು ನಗರದ ವಸ್ತು ಪ್ರದರ್ಶನ ಆವರಣದಲ್ಲಿ ನಡೆಸಲಾಯಿತು. ಇದೇ ಮೊದಲ ಬಾರಿಗೆ ಜಂಬೂಸವಾರಿಯಲ್ಲಿ ಭಾಗವಹಿಸಲು ಆಗಮಿಸಿರುವ ಶ್ರೀಕಂಠ ಆನೆ ಸ್ವಲ್ಪ ಬೆಚ್ಚಿತು. ಜೊತೆಗೆ, ಅಶ್ವದಳದ ಕುದುರೆಗಳೂ ಸಹ ಸಿಡಿಮದ್ದಿನ ಶಬ್ದಕ್ಕೆ ಹೆದರಿದವು.
ನಾಡಹಬ್ಬದ ಜಂಬೂಸವಾರಿ ಮೆರವಣಿಗೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಗಜಪಡೆಗೆ ತಾಲೀಮು, ಭಾರ ಹೊರುವ ತಾಲೀಮು ನಡೆದಿದೆ. ಜಂಬೂಸವಾರಿಯ ದಿನ ಕುಶಾಲತೋಪು ಹಾಗೂ ಮೆರವಣಿಗೆಯ ಸಂದರ್ಭದಲ್ಲಿ ಉಂಟಾಗುವ ಶಬ್ದಕ್ಕೆ ಹೆದರದಂತೆ ಸಿಡಿಮದ್ದು ತಾಲೀಮನ್ನು ನಡೆಸಲಾಯಿತು.
ಸಿಡಿಮದ್ದು ತಾಲೀಮಿನಲ್ಲಿ ಅಭಿಮನ್ಯು ನೇತೃತ್ವದ 14 ಆನೆಗಳು ಹಾಗೂ ಅಶ್ವದಳ ಭಾಗವಹಿಸಿವೆ. ಮೊದಲ ಹಂತದ ತಾಲೀಮಿನ ನಂತರ ಎರಡು ಮತ್ತು ಮೂರನೇ ಹಂತದ ತಾಲೀಮು ನಡೆಸಿ ಗಜಪಡೆಯನ್ನು ಸಿದ್ಧಗೊಳಿಸಲಾಗುತ್ತಿದೆ.