ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವ ವಿಖ್ಯಾತ ಮೈಸೂರು ದಸರಾದ ಜಂಬೂಸವಾರಿಗೆ ಎರಡು ದಿನ ಮಾತ್ರ ಬಾಕಿ ಇದೆ. ಈ ನಿಟ್ಟಿನಲ್ಲಿ ಇಂದು ಬೆಳಗ್ಗೆ ಅಂಬಾವಿಲಾಸ ಅರಮನೆಯ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆಯ ಅಂತಿಮ ತಾಲೀಮು ನಡೆಯಿತು.
ಈ ತಾಲೀಮಿನಲ್ಲಿ ಪೊಲೀಸ್ ವಾದ್ಯ ವೃಂದ ಹಾಗೂ ಇಲಾಖೆಯ ತುಕ್ಕಡಿ ಪಡೆಗಳು ಭಾಗವಹಿಸಿದವು. ಅಲ್ಲದೇ, ಸಾಂಕೇತಿಕವಾಗಿ ಅಧಿಕಾರಿಗಳಿಂದ ಪುಷ್ಪಾರ್ಚನೆಯ ರಿಹರ್ಸಲ್ ಸಹ ನಡೆಯಿತು.
ಅಭಿಮನ್ಯು ನೇತೃತ್ವದ 14 ಗಜಪಡೆಗಳು ರಿಹರ್ಸಲ್ನಲ್ಲಿ ಭಾಗಿಯಾಗಿದ್ದು, ಇದರ ಜೊತೆಗೆ ಅಶ್ವಾರೋಹಿದಳವೂ ಭಾಗಿಯಾಗಿತ್ತು. ಚಿನ್ನದ ಅಂಬಾರಿ ಹೊರುವ ಅಭಿಮನ್ಯು ಆನೆಗೆ ಎಡಭಾಗದಲ್ಲಿ ಕುಂಕಿ ಆನೆಯಾಗಿ ಕಾವೇರಿ, ಬಲ ಭಾಗದಲ್ಲಿ ರೂಪ ಸಾಥ್ ನೀಡಿದವು.
ನಿಶಾನಿಯಾಗಿ ದನಂಜಯ, ನೌಪಾದ್ ಆನೆಯಾಗಿ ಗೋಪಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದು, ಒಂದನೇ ಹಂತದ ಸಾಲಾನೆಯಾಗಿ ಮಹೇಂದ್ರ, ಶ್ರೀಕಂಠ, ಲಕ್ಷ್ಮಿ ಇದ್ದವು. ಎರಡನೇ ಹಂತದ ಸಾಲಾನೆಯಾಗಿ ಕಂಜನ್, ಭೀಮ, ಏಕಲವ್ಯ ಹಾಗೂ ಮೂರನೇ ಹಂತದ ಸಾಲಾನೆಯಾಗಿ ಪ್ರಶಾಂತ, ಸುಗ್ರೀವ, ಹೇಮಾವತಿ ಆನೆಗಳು ಮೆರವಣಿಗೆಯ ರಿಹರ್ಸಲ್ನಲ್ಲಿ ಭಾಗಿಯಾದವು.