ಹೊಸದಿಗಂತ ಡಿಜಿಟಲ್ ಡೆಸ್ಕ್:
ದಸರಾ ಹಬ್ಬದ ಸಂಭ್ರಮಕ್ಕೆ ಇನ್ನೇನು ಒಂದು ದಿನ ಬಾಕಿಯಿರುವಾಗ, ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನತೆಗೆ ಕೇಂದ್ರ ಸರ್ಕಾರ ಶುಭಸುದ್ದಿ ನೀಡಿದೆ. ಸೆಪ್ಟೆಂಬರ್ 22ರಿಂದ ಹೊಸ ಜಿಎಸ್‌ಟಿ ದರಗಳು ಜಾರಿಗೆ ಬರಲಿದ್ದು, ಅನೇಕ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಈಗ ಕೈಗೆಟುಕುವ ಮಟ್ಟದಲ್ಲಿ ಸಿಗಲಿವೆ. ಸುಮಾರು 400ಕ್ಕೂ ಹೆಚ್ಚು ಉತ್ಪನ್ನಗಳ ಮೇಲಿನ ತೆರಿಗೆ ಕಡಿತಗೊಂಡಿದ್ದು, ಆಹಾರ ಪದಾರ್ಥಗಳಿಂದ ಹಿಡಿದು ಕಾಸ್ಮೆಟಿಕ್ ವಸ್ತುಗಳು, ಪಾನೀಯಗಳು ಹಾಗೂ ವೈಯಕ್ತಿಕ ಆರೈಕೆ ಉತ್ಪನ್ನಗಳವರೆಗೆ ಹಲವು ಸಾಮಾನುಗಳು ಕಡಿಮೆ ಬೆಲೆಯಲ್ಲಿ ದೊರಕಲಿವೆ.
ಯಾವ ವಸ್ತುಗಳ ಬೆಲೆ ಎಷ್ಟು ಇಳಿಕೆ?
ವಿಕ್ಸ್ ಆಕ್ಷನ್ 500 ಅಡ್ವಾನ್ಸ್ ಮತ್ತು ಇನ್ಹೆಲರ್ 69 ರೂ. ಬದಲು 64 ರೂ.ಗೆ, ಓರಲ್-ಬಿ ಟೂತ್ ಬ್ರಷ್ 35 ರೂ. ಬದಲು 30 ರೂ.ಗೆ, ಡವ್ ಸೀರಮ್ ಬಾರ್ 45 ರೂ. ಬದಲು 40 ರೂ.ಗೆ, ಲೈಫ್‌ಬಾಯ್ ಸಾಬೂನು 68 ರೂ. ಬದಲು 60 ರೂ.ಗೆ ದೊರಕಲಿದೆ. ಅದೇ ರೀತಿ ಲಕ್ಸ್ ಸೋಪ್ ಪ್ಯಾಕ್ 96 ರೂ. ಬದಲು 85 ರೂ.ಗೆ, ಕ್ಲೋಸಪ್ ಟೂತ್‌ಪೇಸ್ಟ್ 145 ರೂ. ಬದಲು 129 ರೂ.ಗೆ, ಲಾಕ್ ಮೇ ಕಾಂಪ್ಯಾಕ್ಟ್ 675 ರೂ. ಬದಲು 599 ರೂ.ಗೆ ಲಭ್ಯವಾಗಲಿದೆ.
ಆಹಾರ ಉತ್ಪನ್ನಗಳ ಬೆಲೆಯೂ ಇಳಿಕೆಯಾಗಿದೆ. ಕಿಸಾನ್ ಕೆಚಪ್ 110 ರೂ. ಬದಲು 93 ರೂ., ಕಿಸಾನ್ ಜಾಮ್ 90 ರೂ. ಬದಲು 80 ರೂ., ಹಾರ್ಲಿಕ್ಸ್ 130 ರೂ. ಬದಲು 110 ರೂ., ಬೂಸ್ಟ್ 124 ರೂ. ಬದಲು 110 ರೂ., BRU ಕಾಫಿ 300 ರೂ. ಬದಲು 270 ರೂ.ಗೆ ದೊರೆಯಲಿದೆ. ಇನ್ನು ಶಾಂಪೂಗಳು, ತೈಲಗಳು, ಸೂಪ್ ಪೌಡರ್‌ಗಳು, ಬಾಮ್‌ಗಳು, ಮಾಯಿಶ್ಚರೈಸರ್‌ಗಳು ಸಹ ಅಗ್ಗದಲ್ಲಿ ಸಿಗುತ್ತವೆ.
ಸೆಪ್ಟೆಂಬರ್ 3 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜಿಎಸ್‌ಟಿ ದರ ಕಡಿತ ಮತ್ತು ಹೊಸ ಸ್ಲ್ಯಾಬ್‌ಗಳನ್ನು ಘೋಷಿಸಿದ್ದರು. ಹೆಚ್ಚಿನ ವಸ್ತುಗಳು 5% ಮತ್ತು 18% ವರ್ಗಕ್ಕೆ ಬಿದ್ದರೆ, ಕೆಲ ಆಹಾರ ಪದಾರ್ಥಗಳು ಹಾಗೂ ಜೀವ-ಆರೋಗ್ಯ ವಿಮೆಗಳು ಶೂನ್ಯ ತೆರಿಗೆ ವರ್ಗಕ್ಕೆ ಸೇರಿವೆ.
ದರ ಇಳಿಕೆಯ ನಂತರ ಪರೋಕ್ಷ ತೆರಿಗೆ ಅಧಿಕಾರಿಗಳು ಮಾರುಕಟ್ಟೆಯಲ್ಲಿ ಸರಕುಗಳ ಪ್ರಸ್ತುತ ಬೆಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಸರ್ಕಾರ ಜನರಿಗೆ ದರ ಕಡಿತದ ಲಾಭ ನೇರವಾಗಿ ತಲುಪುವಂತೆ ಕ್ರಮಗಳನ್ನು ಕೈಗೊಂಡಿದೆ.