ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ನಡೆಯುತ್ತಿರುವ ಜಾತಿಗಣತಿ ಸಮೀಕ್ಷೆ ಹಿನ್ನೆಲೆಯಲ್ಲಿ ದಸರಾ ರಜೆಯನ್ನು ಅಕ್ಟೋಬರ್ 18ರವರೆಗೆ ವಿಸ್ತರಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಮಾತ್ರ ಈ ನಿರ್ಧಾರ ಅನ್ವಯವಾಗಲಿದ್ದು, ಖಾಸಗಿ ಶಾಲೆಗಳಿಗೆ ರಜೆ ಅನ್ವಯಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ದಸರಾ ಹಬ್ಬದ ಅವಧಿಯಲ್ಲಿ ಸಮೀಕ್ಷಾ ಕಾರ್ಯಕ್ಕೆ ತೊಂದರೆ ಉಂಟಾದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದೇ ವೇಳೆ ದಸರಾ ರಜೆಯಲ್ಲಿರುವ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ 10 ದಿನ ರಜೆ ಸಿಗಲಿದೆ. ಈ ಅವಧಿಯಲ್ಲಿ ಜಾತಿಗಣತಿ ಸರ್ವೇ ಕಾರ್ಯವನ್ನು ಪೂರ್ಣಗೊಳಿಸುವ ಉದ್ದೇಶ ಸರ್ಕಾರದ್ದಾಗಿದೆ. ದ್ವಿತೀಯ ಪಿಯುಸಿ ಉಪನ್ಯಾಸಕರಿಗೆ ಸಮೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ.
ಆಯುಧ ಪೂಜೆ ಮತ್ತು ವಿಜಯದಶಮಿ ಹಿನ್ನೆಲೆಯಲ್ಲಿ ಸಮೀಕ್ಷೆಯ ಗತಿ ಕುಂಠಿತಗೊಂಡಿತ್ತು. 11 ರಿಂದ 14 ಲಕ್ಷ ಮನೆಗಳ ಗುರಿ ಇಟ್ಟಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಕಾರ್ಯ ಮುನ್ನಡೆಯಲಿಲ್ಲ. ಈವರೆಗೆ 1.15 ಕೋಟಿ ಮನೆಗಳ ಸಮೀಕ್ಷೆ ಪೂರ್ಣಗೊಂಡಿದ್ದು, ಇನ್ನೂ 30 ಲಕ್ಷ ಮನೆಗಳ ಸಮೀಕ್ಷೆ ಬಾಕಿ ಉಳಿದಿದೆ.
ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು, ಸಿಎಸ್ ಶಾಲಿನಿ ರಜನೀಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಸರ್ಕಾರ ಹೆಚ್ಚುವರಿ ರಜೆಯಿಂದ ಉಂಟಾಗುವ ಪಾಠದ ಹಿನ್ನಡೆಯನ್ನು ಸರಿಪಡಿಸಲು ವಿಶೇಷ ತರಗತಿಗಳ ಮೂಲಕ ಸರಿಪಡಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.