Saturday, October 11, 2025

ಶಾಲೆಗಳ ದಸರಾ ರಜೆ ಅ.18 ರವರೆಗೆ ವಿಸ್ತರಣೆ: ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ, ಜಾತಿ ಸಮೀಕ್ಷೆ ಕಾರ್ಯ ಸಮರ್ಪಕವಾಗಿ ಪೂರ್ಣಗೊಳ್ಳಲು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ದಸರಾ ರಜೆ ಅವಧಿಯನ್ನು ವಿಸ್ತರಿಸಿ ಸರ್ಕಾರ ಆದೇಶಿಸಿದೆ.

ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾದ ಸುರಲ್ಕರ್ ವಿಕಾಸ ಕಿಶೋರ್ ಆದೇಶ ಹೊರಡಿಸಿದ್ದು, ಕರ್ನಾಟಕ ರಾಜ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ, ಸಮೀಕ್ಷೆಯನ್ನು ಕೈಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಸಮಯ ಮರು ನಿಗದಿ ಮಾಡಿ ಆದೇಶಿಸಲಾಗಿತ್ತು ಎಂದಿದ್ದಾರೆ.

  1. ಬೆಂಗಳೂರು ನಗರ ಮತ್ತು ರಾಜ್ಯದ ಇತರ ಎಲ್ಲ ಜಿಲ್ಲೆಗಳಲ್ಲಿ ನಡೆಯುತ್ತಿರುವ ಸಮೀಕ್ಷೆ ಕಾರ್ಯವನ್ನು ಶಿಕ್ಷಕರು ಪೂರ್ಣಗೊಳಿಸುವುದಕ್ಕೆ ರಾಜ್ಯದ ರಾಜ್ಯ ಪಠ್ಯಕ್ರಮದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ದಸರಾ ರಜೆ ಅವಧಿಯನ್ನು ದಿನಾಂಕ: 18-10-2025 ರ ವರೆಗೆ ವಿಸ್ತರಿಸಲಾಗಿದೆ.
  2. ಶಿಕ್ಷಕರು ಸಮೀಕ್ಷೆ ಕಾರ್ಯವನ್ನು ದಿ: 19-10-2025 ರೊಳಗೆ ಪೂರ್ಣಗೊಳಿಸಬೇಕು. ಅವಧಿಯಲ್ಲಿ ಮಕ್ಕಳ ಕಲಿಕೆಗೆ ಉಂಟಾಗುವ ಕೊರತೆಯ ಅವಧಿಯನ್ನು ರಜಾ ದಿನಗಳ ನಂತರ ವಿಶೇಷ ತರಗತಿಗಳನ್ನು ನಡೆಸುವ ಮೂಲಕ ಸರಿದೂಗಿಸುವುದು.

3.ದಿನಾಂಕ 12-010-2025ರಿಂದ ನಡೆಯಲಿರುವ ದ್ವಿತೀಯ ಪಿಯುಸಿ ಮಧ್ಯಾವಧಿ ಪರೀಕ್ಷೆ ಕಾರ್ಯದಲ್ಲಿ ತೊಡಗಿಸಿಕೊಂಡ ಉಪನ್ಯಾಸಕರನ್ನು ಸಮೀಕ್ಷಾ ಕಾರ್ಯದಿಂದ ಬಿಡುಗಡೆಗೆ ತಿಳಿಸುವುದು.

ಈ ಎಲ್ಲಾ ಅಂಶಗಳಂತೆ ರಾಜ್ಯದ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಕಾರ್ಯನಿರ್ವಹಿಸುವುದು. ಇನ್ನೂ ಕಾಲ ಕಾಲಕ್ಕೆ ಸರ್ಕಾರದಿಂದ ನೀಡುವ ಸೂಚನೆಗಳನ್ನು ಮತ್ತು ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದ್ದಾರೆ.

error: Content is protected !!