ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್ ಹಾಗೂ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿಗೆ ಸೇರಿದ ಬ್ಯಾಂಕ್ ಲಾಕರ್‌ಗಳಿಂದ 50 ಕೋಟಿ ರೂಪಾಯಿ ಮೌಲ್ಯದ 44 ಕೆ.ಜಿ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ.
ಈ ದಾಳಿಯೊಂದಿಗೆ, ಶಾಸಕ ಪಪ್ಪಿ ಮತ್ತು ಅವರ ಸಹಚರರಿಗೆ ಸಂಬಂಧಿಸಿದಂತೆ ಈವರೆಗೆ ಇ.ಡಿ ವಶಪಡಿಸಿಕೊಂಡಿರುವ ಒಟ್ಟು ಆಸ್ತಿ ಮೌಲ್ಯವು ₹150 ಕೋಟಿಗೂ ಅಧಿಕವಾಗಿದೆ.
https://x.com/dir_ed/status/1976293532647182560/photo/2
ಇ.ಡಿ ಮೂಲಗಳ ಪ್ರಕಾರ, ಶಾಸಕ ವೀರೇಂದ್ರ ಪಪ್ಪಿ ಅವರಿಗೆ ಸೇರಿದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿರುವ ಬ್ಯಾಂಕ್‌ನ ಎರಡು ಲಾಕರ್‌ಗಳ ಮೇಲೆ ಇತ್ತೀಚೆಗೆ ಶೋಧ ಕಾರ್ಯ ನಡೆಸಲಾಗಿದೆ. ಈ ಎರಡು ಲಾಕರ್‌ಗಳನ್ನು ತೆರೆದು ಪರಿಶೀಲಿಸಿದಾಗ, ಬರೋಬ್ಬರಿ 44 ಕೆ.ಜಿ ತೂಕದ ಚಿನ್ನಾಭರಣ ಪತ್ತೆಯಾಗಿದೆ. ಅಂದಾಜು ₹50 ಕೋಟಿ ಮೌಲ್ಯದ ಈ ಚಿನ್ನವನ್ನು ಇ.ಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾದ ಕೆ.ಸಿ. ವೀರೇಂದ್ರ ಪಪ್ಪಿ ಅವರನ್ನು ಆಗಸ್ಟ್ ತಿಂಗಳಲ್ಲಿ ಇ.ಡಿ ಅಧಿಕಾರಿಗಳು ಅಕ್ರಮ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಕ್ಕಿಂನ ಗ್ಯಾಂಗ್‌ಟಾಕ್‌ನಲ್ಲಿ ಬಂಧಿಸಿದ್ದರು.