Wednesday, November 5, 2025

CINE | ಇಮ್ರಾನ್ ಹಶ್ಮಿ ‘ಹಕ್’ ಸಿನಿಮಾಗೆ ಕಾನೂನು ಸಂಕಷ್ಟ: ಕೋರ್ಟ್ ಮೆಟ್ಟಿಲೇರಿದ ಮಹಿಳೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಮ್ರಾನ್ ಹಶ್ಮಿ ಮತ್ತು ಯಾಮಿ ಗೌತಮ್ ಅಭಿನಯದ ನೈಜ ಘಟನೆ ಆಧಾರಿತ ‘ಹಕ್’ ಸಿನಿಮಾ ನವೆಂಬರ್ 7ರಂದು ಬಿಡುಗಡೆಯಾಗಬೇಕಿತ್ತು. ಆದರೆ ಇದೀಗ ಈ ಸಿನಿಮಾಗೆ ಕಾನೂನು ತೊಂದರೆ ಎದುರಾಗಿದ್ದು, ಚಿತ್ರ ಬಿಡುಗಡೆಯಾಗಲಿದೆಯೋ ಅಥವಾ ತಡೆ ಬೀಳಲಿದೆಯೋ ಎಂಬ ಪ್ರಶ್ನೆ ಮೂಡಿದೆ. ಶಾಹ್ ಬಾನೋ ಬೇಗಂ ಅವರ ನೈಜ ಜೀವನದ ಮೇಲೆ ಆಧಾರಿತ ಈ ಚಿತ್ರಕ್ಕೆ ಅವರ ಪುತ್ರಿ ಸಿದ್ದೀಖಾ ಬೇಗಂ ಕಾನೂನು ನೋಟಿಸ್ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

‘ಹಕ್’ ಸಿನಿಮಾ ಶಾಹ್ ಬಾನೋ ಬೇಗಂ ಅವರ ಜೀವನಕಥೆಯನ್ನು ಆಧರಿಸಿದೆ. ಆದರೆ ಅವರ ಪುತ್ರಿ ಸಿದ್ದೀಖಾ ಬೇಗಂ ಹೇಳುವ ಪ್ರಕಾರ, ಚಿತ್ರತಂಡವು ಕುಟುಂಬದ ಅನುಮತಿ ಪಡೆಯದೆ ಅವರ ತಾಯಿಯ ಕಥೆಯನ್ನು ಬಳಸಿಕೊಂಡಿದೆ. ಇದಕ್ಕಾಗಿ ಅವರು ಚಿತ್ರ ನಿರ್ದೇಶಕ ಸುಪಾರ್ನ್ ಎಸ್ ವರ್ಮಾ, ನಿರ್ಮಾಪಕರಾದ ಜಂಗ್ಲೀ ಪಿಕ್ಚರ್ಸ್, ಬಾವೇಜಾ ಸ್ಟುಡಿಯೋಸ್ ಮತ್ತು ಕೇಂದ್ರ ಚಿತ್ರ ಪ್ರಮಾಣ ಪತ್ರ ಮಂಡಳಿಗೆ (CBFC) ನೋಟಿಸ್ ನೀಡಿದ್ದಾರೆ.

ನೈಜ ಘಟನೆಗೆ ಆಧಾರಿತ ಕಥೆ:
ಚಿತ್ರದ ಹಿನ್ನೆಲೆ 1985ರ ಸುಪ್ರೀಂ ಕೋರ್ಟ್‌ನ ಪ್ರಸಿದ್ಧ ಮೊಹಮ್ಮದ್ ಅಹ್ಮದ್ ಖಾನ್ ವಿರುದ್ಧ ಶಾಹ್ ಬಾನೋ ಪ್ರಕರಣಕ್ಕೆ ಸಂಬಂಧಿಸಿದೆ. ಈ ತೀರ್ಪು ವಿಚ್ಛೇದಿತ ಮುಸ್ಲಿಂ ಮಹಿಳೆಯರಿಗೆ ಪೋಷಣಾ ಹಕ್ಕು ನೀಡುವಂತೆ ಕಾನೂನಿನಲ್ಲಿ ಬದಲಾವಣೆ ತಂದಿತ್ತು. ಆದರೆ ಸಿದ್ದೀಖಾ ಬೇಗಂ ಅವರ ಆರೋಪ ಪ್ರಕಾರ, ಚಿತ್ರವು ಅವರ ತಾಯಿಯ ವೈಯಕ್ತಿಕ ಮತ್ತು ಕಾನೂನು ಹೋರಾಟದ ನಿಜವಾದ ಘಟನೆಗಳನ್ನು ನಕಲಿಸಿದೆ.

ಶಾಹ್ ಬಾನೋ ಕುಟುಂಬವು ಚಿತ್ರ ಬಿಡುಗಡೆ, ಪ್ರದರ್ಶನ ಮತ್ತು ಪ್ರಚಾರ ತಡೆಯುವಂತೆ ಬೇಡಿಕೆ ಇಟ್ಟಿದೆ. ಆದಾಗ್ಯೂ, ನಿರ್ಮಾಪಕರು ಚಿತ್ರವನ್ನು ನಿಗದಿತ ದಿನಾಂಕ ನವೆಂಬರ್ 7ರಂದು ಬಿಡುಗಡೆ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. ನಿರ್ಮಾಪಕರಾದ ವಿನೀತ್ ಜೈನ್, ವಿಷಾಲ್ ಗುರ್ಣಾನಿ, ಜೂಹಿ ಪಾರೆಖ್ ಮೇಹ್ತಾ ಹಾಗೂ ಹರ್ಮನ್ ಬಾವೇಜಾ ಇವರುಗಳು ಈ ವಿವಾದ ಕುರಿತು ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

‘ಹಕ್’ ಟ್ರೇಲರ್ ಬಿಡುಗಡೆಯಾದ ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಭುಗಿಲೆದ್ದಿತು. ಕೆಲವು ಮಂದಿ ಸಿನಿಮಾ ಮುಸ್ಲಿಂ ಸಮುದಾಯದ ವಿರುದ್ಧ ನಕಾರಾತ್ಮಕ ಚಿತ್ರಣ ನೀಡುತ್ತದೆ ಎಂದು ಆಕ್ಷೇಪಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಇಮ್ರಾನ್ ಹಶ್ಮಿ, “ಈ ಸಿನಿಮಾ ಯಾವುದೇ ಸಮುದಾಯವನ್ನು ತಪ್ಪಾಗಿ ತೋರಿಸುವ ಉದ್ದೇಶದಿಂದ ಮಾಡಲಾಗಿಲ್ಲ. ಇದು ಮಹಿಳೆಯ ಹಕ್ಕುಗಳ ಬಗ್ಗೆ ಮಾತನಾಡುವ ಚಿತ್ರ,” ಎಂದು ಸ್ಪಷ್ಟಪಡಿಸಿದರು.

error: Content is protected !!