ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರ ಮಿನಿ ಹರಾಜಿಗಾಗಿ ಸಿದ್ಧತೆಗಳು ಶುರುವಾಗಿದ್ದು, ಒಟ್ಟು 359 ಆಟಗಾರರ ಅಂತಿಮ ಪಟ್ಟಿ ಪ್ರಕಟವಾಗಿದೆ. ಆದರೆ ಈ ಬಾರಿಯ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟರ್ ಹ್ಯಾರಿ ಬ್ರೂಕ್ ಹೆಸರು ಕಾಣಿಸಿಕೊಂಡಿಲ್ಲ. ಇದಕ್ಕೆ ಕಾರಣ ಅಚ್ಚರಿ ಮೂಡಿಸುವಂತಿದೆ. ಬ್ರೂಕ್ ಅವರನ್ನು ಐಪಿಎಲ್ ಗವರ್ನರ್ ಕೌನ್ಸಿಲ್ 2 ವರ್ಷಗಳ ಕಾಲ ಟೂರ್ನಮೆಂಟ್‌ನಿಂದ ನಿಷೇಧಿಸಿದೆ.
ನಿಷೇಧಕ್ಕೆ ಕಾರಣವೇನು?
ಹ್ಯಾರಿ ಬ್ರೂಕ್ ಅವರು ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಆಗ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಅವರನ್ನು ಬರೋಬ್ಬರಿ 6.25 ಕೋಟಿ ರೂಪಾಯಿಗೆ ಖರೀದಿಸಿತ್ತು. ಆದರೆ, ಟೂರ್ನಿ ಆರಂಭಕ್ಕೆ ಕೆಲವೇ ದಿನಗಳ ಮುಂಚೆ ಬ್ರೂಕ್ ಐಪಿಎಲ್ನಿಂದ ದಿಢೀರನೇ ಹಿಂದೆ ಸರಿದಿದ್ದರು.
ಅಂತರರಾಷ್ಟ್ರೀಯ ಕ್ರಿಕೆಟ್‌ಗಾಗಿ ಹೆಚ್ಚು ಸಿದ್ಧತೆ ಮಾಡಿಕೊಳ್ಳುವ ಕಾರಣ ನೀಡಿ ಬ್ರೂಕ್ ಐಪಿಎಲ್ಗೆ ಲಭ್ಯರಿರುವುದಿಲ್ಲ ಎಂದು ತಿಳಿಸಿದ್ದರು. ಆದರೆ, ಅವರ ಈ ನಿರ್ಧಾರ ಈಗ ಅವರಿಗೆ ದೊಡ್ಡ ಮುಳುವಾಗಿದೆ.
ಐಪಿಎಲ್‌ನಲ್ಲಿ ಕೆಲ ವಿದೇಶಿ ಆಟಗಾರರು ಹರಾಜಿನಲ್ಲಿ ಆಯ್ಕೆಯಾದರೂ, ಕೊನೆಯ ಕ್ಷಣದಲ್ಲಿ ಟೂರ್ನಿಯಿಂದ ಹಿಂದೆ ಸರಿಯುವ ಪ್ರವೃತ್ತಿ ಹೆಚ್ಚಿತ್ತು. ಇದನ್ನು ನಿಯಂತ್ರಿಸಲು ಮತ್ತು ವಿದೇಶಿ ಆಟಗಾರರ ಇಂತಹ ನಡೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬಿಸಿಸಿಐ ಒಂದು ಹೊಸ ನಿಯಮ ಜಾರಿಗೊಳಿಸಿದೆ.
ಐಪಿಎಲ್‌ನ ಹೊಸ ನಿಯಮದ ಪ್ರಕಾರ, ಹರಾಜಿನ ಮೂಲಕ ಆಯ್ಕೆಯಾದ ಆಟಗಾರರು ಸಮಂಜಸ ಕಾರಣವಿಲ್ಲದೆ ಟೂರ್ನಿಯಿಂದ ಹಿಂದೆ ಸರಿದರೆ, ಅಂತಹ ಆಟಗಾರರ ಮೇಲೆ 2 ವರ್ಷಗಳ ನಿಷೇಧ ಹೇರಲಾಗುತ್ತದೆ.
ಕಳೆದ ಬಾರಿ ಐಪಿಎಲ್ನಿಂದ ಹಿಂದೆ ಸರಿದಿದ್ದ ಹ್ಯಾರಿ ಬ್ರೂಕ್ ಅವರ ಮೇಲೆ ಈ ಹೊಸ ನಿಯಮವನ್ನು ಹೇರಲಾಗಿದೆ. ಇದರ ಪರಿಣಾಮವಾಗಿ, ಇಂಗ್ಲೆಂಡ್‌ನ ಈ ಆಟಗಾರನನ್ನು ಐಪಿಎಲ್ 2026 ಮತ್ತು 2027 ರ ಹರಾಜಿಗೆ ಪರಿಗಣಿಸಲಾಗುವುದಿಲ್ಲ. ಹಾಗಾಗಿ, ಹ್ಯಾರಿ ಬ್ರೂಕ್ ಮತ್ತೆ ಐಪಿಎಲ್‌ನಲ್ಲಿ ಆಡಬೇಕೆಂದರೆ 2028 ರವರೆಗೆ ಕಾಯಲೇಬೇಕಿದೆ. ಇದು ವಿಶ್ವ ಕ್ರಿಕೆಟ್ನಲ್ಲಿ ಸಂಚಲನ ಮೂಡಿಸಿದ ನಿರ್ಧಾರವಾಗಿದೆ.

