Wednesday, December 10, 2025

ಪರಿಸರವಾದಿಗಳಿಗೆ ಪ್ರತಿವರ್ಷ ತಿಮ್ಮಕ್ಕನವರ ಹೆಸರಿನಲ್ಲಿ ಪ್ರಶಸ್ತಿ: ಸಿಎಂ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪರಿಸರವಾದಿಗಳಿಗೆ ಪ್ರತಿವರ್ಷ ಸಾಲುಮರದ ತಿಮ್ಮಕ್ಕನವರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಸಾಲುಮರದ ತಿಮ್ಮಕ್ಕನವರು 114 ವರ್ಷಗಳ ಕಾಲ ಬದುಕಿ ದೈವಾಧೀನರಾಗಿದ್ದಾರೆ. ಇವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದ್ದರು. ಮಕ್ಕಳಿಲ್ಲದ ತಿಮ್ಮಕ್ಕನವರು ಮರಗಿಡಗಳನ್ನೇ ತಮ್ಮ ಮಕ್ಕಳಂತೆ ಸಾಕುತ್ತಿದ್ದರು. ಅವರು ನೆಟ್ಟಿರುವ ಮರಗಳು ಇವತ್ತು ಹೆಮ್ಮರವಾಗಿ ಬೆಳೆದು ನಿಂತು ಜನರಿಗೆ ನೆರಳು ನೀಡುತ್ತಿವೆ. ಸುಮಾರು 4,000 ಕ್ಕೂ ಹೆಚ್ಚು ಮರಗಳನ್ನು ಬೆಳೆಸುವ ಮೂಲಕ ಸಾಲುಮರದ ತಿಮ್ಮಕ್ಕ ಎಂದೇ ಹೆಸರುವಾಸಿಯಾಗಿದ್ದರು.

ಅವರು ಬೆಳೆಸಿದ ಮರಗಳು ದಶಕಗಳಷ್ಟು ಹಳೆಯದಾಗಿದ್ದು, ಅವುಗಳು ಪರಿಸರಕ್ಕೆ ಮತ್ತು ಜೀವವೈವಿಧ್ಯಕ್ಕೆ ಅಪಾರ ಕೊಡುಗೆ ನೀಡಿವೆ. ಪರಿಸರವಾದಿಯಾಗಿದ್ದ ತಿಮ್ಮಕ್ಕನವರ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ತಿಮ್ಮಕ್ಕ ಅವರು ಬೇಲೂರಿನಲ್ಲಿ ತಿಮ್ಮಕ್ಕ ವಸ್ತು ಸಂಗ್ರಹಾಲಯವನ್ನು ಮಾಡಬೇಕು ಎಂದು ತಮ್ಮ ಕೊನೆಯ ಆಸೆಯನ್ನು ಪತ್ರ ಮುಖೇನ ತಿಳಿಸಿದ್ದು, ಈ ಬಗ್ಗೆ ಸರ್ಕಾರ ಪರಿಶೀಲಿಸಲಿದೆ.ಗಿಡಗಳನ್ನು ಮಕ್ಕಳಂತೆ ಕಂಡು ಪೋಷಿಸಿ ಬೆಳೆಸಿದ್ದ ತಿಮ್ಮಕ್ಕ ಅವರ ಸಾಧನೆಗೆ 1995ರಲ್ಲಿ ರಾಷ್ಟ್ರೀಯ ಪೌರ ಪ್ರಶಸ್ತಿ ಸಂದಿದೆ. 1997ರಲ್ಲಿ ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಹಾಗೂ ನಾಡೋಜ ಪ್ರಶಸ್ತಿಗೂ ಭಾಜನರಾಗಿದ್ದಾರೆ.

error: Content is protected !!