ಹೊಸದಿಗಂತ ವರದಿ ಹಾನಗಲ್:
ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದ ಕುಮಾರೇಶ್ವರ ಮಠ ಸೇರಿ ಕಾರು, ಬಸ್, ಶಾಲೆಗಳು ಸೇರಿ ವಿವಿಧೆಡೆ ಆರ್‌ಡಿಎಕ್ಸ್ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಕರೆ ಬಂದಿದ್ದರಿಂದ ಶುಕ್ರವಾರ ಮಧ್ಯಾಹ್ನ ಪಟ್ಟಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ತುರ್ತು ಸಹಾಯವಾಣಿ 112ಗೆ ಕರೆ ಬಂದ ತಕ್ಷಣವೇ ಎಚ್ಚೆತ್ತ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ, ಡಾಗ್ ಸ್ಕ್ವಾಡ್ ಜತೆ ತೆರಳಿ ತಪಾಸಣೆ ನಡೆಸಿದ್ದಾರೆ.
ಈ ಬಗ್ಗೆ ಎಸ್ಪಿ ಯಶೋಧಾ ವಂಟಗೋಡಿ ಪ್ರತಿಕ್ರಿಯಿಸಿ, ಹಾನಗಲ್ ಜನರು ಆತಂಕಪಡುವ ಅವಶ್ಯಕತೆ ಇಲ್ಲ. ಕರೆ ಮಾಡಿರುವ ನಂಬರ್ ಟ್ರೇಸ್ ಮಾಡಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ. ಆತ ಮಾನಸಿಕ ಅಸ್ವಸ್ಥತೆಯಿಂದ ಕೂಡಿದವನೆಂದು ತಿಳಿದುಬಂದಿದ್ದು, ಹೆಚ್ಚಿನ ತನಿಖೆ ನಡೆಸಿ ಅವರ ಸಂಬಂಧಿಕರನ್ನು ವಿಚಾರಿಸಲಾಗಿದೆ.
ಹರೀಶ ಎಂಬಾತ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದ. ಈತ ಡಿಆರ್‌ಡಿಒದಲ್ಲಿ ಡ್ರೈವರ್ ಆಗಿದ್ದ. ಆತನಿಗೆ ಮಾನಸಿಕ ಅಸ್ವಸ್ಥತೆ ಇದೆ ಎನ್ನಲಾಗಿದೆ.
ಮುಂಜಾಗ್ರತವಾಗಿ ಬಾಂಬ್ ಪತ್ತೆಗಾಗಿ ಎಎಸ್‌ಪಿ ಮತ್ತು ಸೊಕೊ ಟೀಂ, ಹಾನಗಲ್ ಪಟ್ಟಣದ ಕುಮಾರೇಶ್ವರ ಮಠ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚುರುಕಾಗಿ ಶೋಧ ಕಾರ್ಯಾಚರಣೆ ನಡೆಸಿದ್ದು, ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ಯಾರೂ ಭಯ ಪಡುವ ಅವಶ್ಯಕತೆಯಿಲ್ಲ ಎಂದು ಎಸ್‌ಪಿ ಯಶೋಧಾ ವಂಟಗೋಡಿ ಅಭಯ ನೀಡಿದ್ದಾರೆ.