ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದೀಗ ಸಾಲು ಸಾಲು ಹಬ್ಬಗಳು ಆರಂಭವಾಗುತ್ತಿದ್ದಂತೆ, ಬೆಂಗಳೂರಿನ ಬ್ಯಾಂಕ್ ಗ್ರಾಹಕರನ್ನು ಟಾರ್ಗೆಟ್ ಮಾಡಿರುವ ಖದೀಮರು ವಿವಿಧ ಆಫರ್ಗಳನ್ನು ನೀಡುವ ಮೂಲಕ ವಂಚನೆಗಿಳಿದಿದ್ದಾರೆ.
ಬ್ಯಾಂಕ್ ಗ್ರಾಹಕರನ್ನು ಟಾರ್ಗೆಟ್ ಮಾಡಿಕೊಂಡಿರುವ ಸೈಬರ್ ವಂಚಕರು, ಪ್ರತಿಷ್ಠಿತ ಬ್ಯಾಂಕ್ಗಳಂತೆ ವೆಬ್ಸೈಟ್ಗಳನ್ನು ಮಾಡಿಕೊಂಡು ಗ್ರಾಹಕರಿಗೆ ನಕಲಿ ರಿವಾರ್ಡ್ಗಳು ಮತ್ತು ಕ್ಯಾಶ್‌ಬ್ಯಾಕ್ ಆಫರ್‌ಗಳ ಲಿಂಕ್ಗಳನ್ನು ಕಳುಹಿಸುವ ಮೂಲಕ ವಂಚಿಸುತ್ತಿದ್ದಾರೆ.
ವಂಚಕರು, ಬ್ಯಾಂಕ್ ಗ್ರಾಹಕರಿಗೆ ಬಳಸದ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿಕೊಳ್ಳಬಹುದು ಅಥವಾ ಹಬ್ಬದ ಕ್ಯಾಶ್‌ಬ್ಯಾಕ್ ಪಡೆಯಬಹುದು ಎಂದು ನಂಬಿಸುತ್ತಾರೆ. ಜನರನ್ನು ನಂಬಿಸಲು ವಂಚಕರು, ಪ್ರಮುಖ ಖಾಸಗಿ ಬ್ಯಾಂಕುಗಳು ಮತ್ತು ಇತರ ಪ್ರಮುಖ ಹಣಕಾಸು ಸಂಸ್ಥೆಗಳ ಹೆಸರುಗಳನ್ನು ಬಳಸಿಕೊಳ್ಳುತ್ತಾರೆ.
ವಂಚಕರ ಆಫರ್ಗಳಿಗೆ ಮಾರುಹೋಗಿ ಅವರು ಕಳುಹಿಸಿದ ಲಿಂಕ್ ಅಥವಾ ಎಪಿಕೆ ಫೈಲ್‌ಗಳನ್ನು ಒಂದು ವೇಳೆ ಡೌನ್‌ಲೋಡ್ ಮಾಡಿಕೊಂಡರೆ, ಗ್ರಾಹಕರು ಬಲಿಪಶುವಾದಂತೆ. ಬ್ಯಾಂಕ್ ಅಧಿಕಾರಿಗಳೆಂದು ಹೇಳಿಕೊಂಡು ಫೋನ್ ಮಾಡುವ ವಂಚಕರು, ರಿವಾರ್ಡ್ ಪಾಯಿಂಟ್‌ಗಳನ್ನು ನೀಡುವ ನೆಪದಲ್ಲಿ ಕ್ರೆಡಿಟ್ ಕಾರ್ಡ್ ಮಾಹಿತಿ ಸೇರಿದಂತೆ ಒಟಿಪಿ ವಿವರಗಳನ್ನು ಪಡೆದುಕೊಳ್ಳುತ್ತಾರೆ. ಬಳಿಕ ಎಲ್ಲೋ ದೂರದಲ್ಲೇ ಕುಳಿತು ಕ್ಷಣ ಮಾತ್ರದಲ್ಲಿ ನೋಡನೋಡುತ್ತಿದ್ದಂತೆ ಖಾತೆಯಲ್ಲಿರುವ ಹಣವನ್ನು ಎಗರಿಸುತ್ತಾರೆ. ಜಾಗ್ರತೆಯಿಂದ ಇರಿ!