ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಲೂರು ತಾಲೂಕಿನ ಅರೇಹಳ್ಳಿ ಗ್ರಾಮದಲ್ಲಿ ಕಾಫಿ ಕಳ್ಳತನ ತಡೆಯಲು ಮುಂದಾದ ಕಾಫಿ ಬೆಳೆಗಾರರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕಾಫಿ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ವಿವರ:
ಡಿಸೆಂಬರ್ 11 ರಂದು ಬೇಲೂರು ತಾಲೂಕಿನ ಅರೇಹಳ್ಳಿ ಗ್ರಾಮದಲ್ಲಿ ಕಾಫಿ ಬೆಳೆಗಾರ ಜಗನ್ನಾಥ್ ಶೆಟ್ಟಿಯವರ ತೋಟದಲ್ಲಿ ಕಳ್ಳತನ ಮಾಡಲು ಯತ್ನಿಸಲಾಗಿತ್ತು. ಇದನ್ನು ತಡೆಯಲು ಹೋದ ಜಗನ್ನಾಥ್ ಶೆಟ್ಟಿಯವರ ಮೇಲೆ ಆರೋಪಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ನಂತರ, ತೋಟದಿಂದ ಅಪಾರ ಪ್ರಮಾಣದ ಕಾಫಿ ಹಣ್ಣುಗಳನ್ನು ಕಳವು ಮಾಡಿದ್ದರು. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಜಗನ್ನಾಥ್ ಶೆಟ್ಟಿ ಅವರು ಸಾವನ್ನಪ್ಪಿದ್ದರು. ಈ ಘಟನೆ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು.
ಪ್ರಕರಣದ ಗಂಭೀರತೆ ಅರಿತ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ತನಿಖೆ ಕೈಗೊಂಡಿದ್ದರು. ಕೃತ್ಯ ಎಸಗಿದ್ದ ಐವರು ಕಳ್ಳರು ಸೇರಿದಂತೆ ಕಳವು ಮಾಡಿದ ಕಾಫಿಯನ್ನು ಖರೀದಿಸಿದ್ದ ವ್ಯಾಪಾರಿಯನ್ನೂ ಪೊಲೀಸರು ಬಂಧಿಸಿದ್ದಾರೆ.
ಶಾಹಿದ್ ಮುಬಾರಕ್ (19), ಜಹೀರ್ (32), ಸಾಗರ್ (21), ಪಜ್ವಲ್ (21), ಮತ್ತು ಹಜೀಜ್ (22) ಬಂಧಿತ ಆರೋಪಿಗಳು. ಸುನೀಲ್ (35) ಕಳ್ಳತನದ ಕಾಫಿ ಎಂದು ತಿಳಿದಿದ್ದರೂ ಅದನ್ನು ಖರೀದಿಸಿದ್ದ ವ್ಯಾಪಾರಿ.
ಇನ್ಸ್‌ಪೆಕ್ಟರ್ ಜಗದೀಶ್ ಅವರ ನೇತೃತ್ವದಲ್ಲಿ ಕಾನ್‌ಸ್ಟೆಬಲ್‌ಗಳಾದ ಶಶಿ, ನಂದೀಶ್, ಮಂಜುನಾಥ್ ಮತ್ತು ಇತರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಈ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

