Friday, September 12, 2025

ಹೇಮಾವತಿ ಸಂಪರ್ಕ ಕಾಲುವೆ ಯೋಜನೆಯಲ್ಲಿ ರೈತರಿಗೆ ಯಾವುದೇ ಭಯ ಬೇಡ: ಡಿ.ಕೆ. ಶಿವಕುಮಾರ್ ಅಭಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೇಮಾವತಿ ಸಂಪರ್ಕ ಕಾಲುವೆ ಯೋಜನೆ ಕಾಮಗಾರಿ ಸ್ಥಳ ಪರಿಶೀಲನೆ ಮಾಡಿದ್ದು, ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.

ತುಮಕೂರಿನ ಸುಂಕಾಪುರ ಬಳಿ ನಡೆಯುತ್ತಿರುವ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಪರಿವೀಕ್ಷಣೆ ನಂತರ ಜಲಸಂಪನ್ಮೂಲ ಸಚಿವರೂ ಆಗಿರುವ ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಈ ವಿಚಾರದಲ್ಲಿ ರೈತರು ಗಾಬರಿಯಾಗುವುದು ಬೇಡ. ಅಧಿಕಾರಿಗಳ ಜೊತೆ ಚರ್ಚೆ ಮಾಡಿ, ತುಮಕೂರು ಜಿಲ್ಲೆಯ ರೈತರ ರಕ್ಷಣೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೇಂದ್ರ ಸಚಿವರಾದ ಸೋಮಣ್ಣ ಹಾಗೂ ಶಾಸಕರ ಸಲಹೆ ಮೇರೆಗೆ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಸ್ಥಳ ಪರಿಶೀಲನೆ ಮಾಡುತ್ತಿದ್ದು, ತುಮಕೂರಿನ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ನಮ್ಮ ಜವಾಬ್ದಾರಿ. ತುಮಕೂರಿನ ಜನರು ಪ್ರತಿ ಸಂದರ್ಭದಲ್ಲಿಯೂ ಸಂಯಮದಿಂದ ಸಹಕಾರ ನೀಡಿದ್ದಾರೆ. ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ, ಈ ಯೋಜನೆ ಪ್ರಾರಂಭಿಸಲಾಯಿತು. ನಂತರ ಬಿಜೆಪಿ ಸರ್ಕಾರ ಈ ಯೋಜನೆ ನಿಲ್ಲಿಸಿತ್ತು. ಪರಿಣಾಮ 600 ಕೋಟಿಯಿದ್ದ ಯೋಜನಾ ವೆಚ್ಚ ಇಂದು ಒಂದು ಸಾವಿರ ಕೋಟಿಗೆ ಏರಿಕೆಯಾಗಿದೆ. ಈಗಾಗಲೇ ಕೆಲಸ ಆರಂಭವಾಗಿದ್ದು, ಪೈಪ್‌ಗಳ ಖರೀದಿ ಹಾಗೂ ಕೆಲಸ ಆರಂಭಿಸಿ 400 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ನಾಲ್ಕೈದು ತಿಂಗಳಲ್ಲಿ ಮುಗಿಯುವ ಕೆಲಸ ಎಂದು ಹೇಳಿದರು.

ಇದನ್ನೂ ಓದಿ