Friday, January 9, 2026

ಕಲಬುರಗಿ ಜೈಲಿನಲ್ಲಿ ಕೈದಿಗಳ ನಡುವೆ ಮಾರಾಮಾರಿ: ಬೆಂಗಳೂರು ಮೂಲದ ಕೈದಿ ಮೇಲೆ ಹಲ್ಲೆ

ಹೊಸದಿಗಂತ ಕಲಬುರಗಿ:

ಇತ್ತೀಚೆಗಷ್ಟೇ ವಿಡಿಯೋ ವೈರಲ್ ಪ್ರಕರಣದಿಂದ ಸುದ್ದಿಯಾಗಿದ್ದ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಇದೀಗ ಕೈದಿಗಳ ನಡುವೆ ರಕ್ತಪಾತ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ, ಬೆಂಗಳೂರು ಮೂಲದ ಕೈದಿ ಹಾಗೂ ಸ್ಥಳೀಯ ಕೈದಿಗಳ ನಡುವೆ ಭೀಕರ ಮಾರಾಮಾರಿ ಸಂಭವಿಸಿದೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಕಲಬುರಗಿ ಜೈಲಿಗೆ ಸ್ಥಳಾಂತರಗೊಂಡಿದ್ದ ವೆಂಕಟರಮಣ ಎಂಬ ಕೈದಿ, ಸ್ಥಳೀಯ ಕೈದಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಸ್ಥಳೀಯ ಕೈದಿಗಳು ವೆಂಕಟರಮಣನ ಮೇಲೆ ಹಲ್ಲೆ ನಡೆಸಿದ್ದಾರೆ. ಜೈಲಿನ ಆವರಣದಲ್ಲೇ ನಡೆದ ಈ ಘರ್ಷಣೆಯಿಂದ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಫರಹತಾಬಾದ್ ಪೊಲೀಸರು ಜೈಲಿಗೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸದ್ಯ ಮುನ್ನೆಚ್ಚರಿಕಾ ಕ್ರಮವಾಗಿ ಹಲ್ಲೆಗೊಳಗಾದ ಕೈದಿ ವೆಂಕಟರಮಣನನ್ನು ಪ್ರತ್ಯೇಕ ಸೆಲ್‌ಗೆ ಸ್ಥಳಾಂತರಿಸಲಾಗಿದೆ.

ಇತ್ತೀಚೆಗಷ್ಟೇ ಜೈಲಿನಲ್ಲಿ ಕೈದಿಗಳ ‘ಹೈಫೈ’ ಜೀವನದ ವಿಡಿಯೋ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಅವರು ಭೇಟಿ ನೀಡಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದರು. ಇಷ್ಟಾದರೂ ಜೈಲಿನೊಳಗೆ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಜೈಲು ಆಡಳಿತ ಮಂಡಳಿಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳು ಏಳುವಂತೆ ಮಾಡಿದೆ.

error: Content is protected !!