ಹೊಸದಿಗಂತ ಡಿಜಿಟಲ್ ಡೆಸ್ಕ್:
ಹುಬ್ಬಳ್ಳಿ ನಗರದ ಹೊರವಲಯದ ಕುಂದಗೋಳ ಕ್ರಾಸ್‌ನಲ್ಲಿ ಇಂದು ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ನಾಲ್ಕು ಅಂಗಡಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.
ಮೂಲಗಳ ಪ್ರಕಾರ, ಇಲ್ಲಿನ ಸ್ಥಳೀಯ ಡಾಬಾವೊಂದರಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಗಾಳಿಯ ತೀವ್ರತೆಗೆ ಬೆಂಕಿ ಕ್ಷಣಾರ್ಧದಲ್ಲಿ ಅಕ್ಕಪಕ್ಕದ ಅಂಗಡಿಗಳಿಗೂ ವ್ಯಾಪಿಸಿತು. ನೋಡನೋಡುತ್ತಿದ್ದಂತೆಯೇ ಜ್ವಾಲೆಯು ರೌದ್ರಾವತಾರ ತಾಳಿದ್ದರಿಂದ, ಅಂಗಡಿಯಲ್ಲಿದ್ದ ವಸ್ತುಗಳನ್ನು ಹೊರತೆಗೆಯಲು ಕೂಡ ಸಮಯ ಸಿಗದಂತಾಗಿತ್ತು. ಪರಿಣಾಮವಾಗಿ ನಾಲ್ಕು ವ್ಯಾಪಾರ ಮಳಿಗೆಗಳು ಅಗ್ನಿಗೆ ಆಹುತಿಯಾಗಿವೆ.
ಘಟನಾ ಸ್ಥಳಕ್ಕೆ ತಕ್ಷಣವೇ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಈ ಘಟನೆಯು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಅಗ್ನಿ ಅವಘಡಕ್ಕೆ ನಿಖರವಾದ ಕಾರಣ ಮತ್ತು ಆದ ನಷ್ಟದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

